ವೀರಾಂಜನೇಯ ಸ್ವಾಮಿ, ಶನಿ ಮಹಾತ್ಯ ಸ್ವಾಮಿಯ ಬ್ರಹ್ಮ ರಥೋತ್ಸವ
ಆನೇಕಲ್.ಏ.೧೮:ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತಿಮ್ಮಸಂದ್ರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ತಿರುಮಲ ವೀರಾಂಜನೇಯ ಸ್ವಾಮಿ ಮತ್ತು ಶ್ರೀ ಶನಿ ಮಹಾತ್ಯ ಸ್ವಾಮಿಯ ಬ್ರಹ್ಮ ರಥೋತ್ಸವ ಮತ್ತು ಶ್ರೀ ಮಾರಮ್ಮ ದೇವಿಯ ತೃತೀಯ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಪಾರ ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಇನ್ನು ಹಲವು ಕಲಾತಂಡಗಳೊಂದಿಗೆ ಶ್ರೀ ತಿರುಮಲ ವೀರಾಂಜನೇಯ ಸ್ವಾಮಿ ಮತ್ತು ಶ್ರೀ ಶನಿ ಮಹಾತ್ಯ ಸ್ವಾಮಿಯ ರಥಗಳು ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ರಥಗಳಿಗೆ ಭವ್ಯ ಸ್ವಾಗತ ಕೋರಿದರು. ಮತ್ತು ಗ್ರಾಮಸ್ಥರು ಗೋವಿಂದ ಗೋವಿಂದ ಎಂದು ಹೇಳಿ ರಥಗಳನ್ನು ಕೈಯಿಂದ ಎಳೆದ ದೃಶ್ಯಗಳು ಕಂಡು ಬಂತು. ಹಾಗೆಯೇ ಸ್ವಾಮಿಗೆ ಮತ್ತು ದೇವಾಲಯಕ್ಕೆ ವಿಶೇಷ ಅಲಂಕಾರ, ವಿಶೇಷ ಅಭಿಷೇಕ. ವಿವಿಧ ಹೋಮಗಳು, ವೀರಗಾಸೆ ಕುಣಿತ, ಡೊಳ್ಳು ಕುಣಿತ, ನಂದಿ ದ್ವಜಾ ಕುಣಿತ, ಅರವಂಟಿಕೆ ಮತ್ತು ಅನ್ನದಾಸೋಹ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಗ್ರಾಮಸ್ಥರ ಮತ್ತು ಭಕ್ತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಮುನಿರಾಜು ಸೇರಿದಂತೆ ದೊಡ್ಡ ತಿಮ್ಮಸಂದ್ರ ಗ್ರಾಮದ ಹಿರಿಯರು, ಸ್ಥಳೀಯರ ಮುಖಂಡರುಗಳು ಮತ್ತು ಭಕ್ತರು ಬಾಗವಹಿಸಿದ್ದರು.