ಮಕ್ಕಳ ರಕ್ಷಣೆಗಾಗಿ ಇರುವ ಕಾಯಿದೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕು
ಭಾಲ್ಕಿ:ಸೆ.೨೧: ಮಕ್ಕಳ ರಕ್ಷಣೆಗಾಗಿ ಇರುವ ಎಲ್ಲಾ ಕಾಯಿದೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಕಾರ್ಯವಾಗಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಕರೆದ ವಿವಿಧ ಇಲಾಖಾ ಅಧಿಕಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಿಧಾನದ ೫೪ನೇ ಪರಿಛೇದ ಮಕ್ಕಳ ರಕ್ಷಣೆಗಾಗಿಯೇ ಇದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕು ರಕ್ಷಣಾ ಕಾಯಿದೆಗೆ ೧೯೨ ರಾಷ್ಟçಗಳು ಒಪ್ಪಿಗೆ ನೀಡಿವೆ. ಸುಮಾರು ೪೨% ಮಕ್ಕಳನ್ನು ಹೊಂದಿರುವ ಭಾರತದಲ್ಲಿ, ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆಗಳು ಸರಿಯಾಗಿ ಅನುಷ್ಠಾನಕ್ಕೆ ತರುವುದು ಎಲ್ಲಾ ಅಧಿಕಾರಿಗಳ ಹೊಣೆ ಯಾಗಿದೆ. ತಳಮಟ್ಟದ ಮಕ್ಕಳ ಸಮಸ್ಯೆಗಳನ್ನು ಸರಿಪಡಿಸುವ ಕಾರ್ಯವಾಗಬೇಕು. ಆಯೋಗದ ಸದಸ್ಯರು ಬಂದಾಗ ಇಂತಹ ಸಮಸ್ಯೆಗಳು ಕಂಡು ಬರಬಾರದು. ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿಯ ಮಕ್ಕಳ ಹಕ್ಕು ರಕ್ಷಿಸುವ ಕಾರ್ಯಮಾಡಬೇಕು ಎಂದು ಹೇಳಿದರು.
ಶಾಲೆಬಿಟ್ಟ ಮಕ್ಕಳ ಕ್ರಮದ ಬಗ್ಗೆ ಮಾಹಿತಿ
ತಾಲೂಕಿನಲ್ಲಿ ಒಟ್ಟು ೬೨ ವಿದ್ಯಾರ್ಥಿಗಳು ಶಾಲೆಬಿಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಇವರಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೇಳಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, ೬೨ ವಿದ್ಯಾರ್ಥಿಗಳಲ್ಲಿ, ಅವರ ಮನೆ, ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅವರಲ್ಲಿ ೩೬ ವಿದ್ಯಾರ್ಥಿಗಳನ್ನು ಪುನ: ಶಾಲೆಗೆ ಸೇರಿಸಿ ಕೊಳ್ಳಲಾಗಿದೆ. ೧೫ ವಿದ್ಯಾರ್ಥಿಗಳು ಬೇರೆ ಸ್ಥಳಕ್ಕೆ ವರ್ಗಾಯಿಸಲ್ಪಟ್ಟಿದ್ದಾರೆ ಇನ್ನುಳಿದ ೨೧ ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಶಾಲೆಗೆ ಬರುತ್ತಿಲ್ಲ. ಅವರನ್ನೂ ಶಾಲೆಗೆ ಸೇರಿಸಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನಿಡಿದರು. ಅಲ್ಲದೇ ತಾಲೂಕಿನಲ್ಲಿ ಒಟ್ಟು ೧೩೯ ಕಿರಿಯ ಪ್ರಾಥಮಿಕ ಶಾಲೆಗಳಿವೆ, ೧೯೯ ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ೮೧ ಪ್ರೌಢಶಾಲೆಗಳಿವೆ ಇವುಗಳಲ್ಲಿ ಒಟ್ಟು ೪೩೬೯೯ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎಲ್ಲಾ ಮಕ್ಕಳಿಗೂ ಸೂಕ್ತವಾದ ಪರಿಸರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷ ನ್ಯೂನತೆ ಹೊಂದಿರುವ ಮಕ್ಕಳಿಗೆ ಅವರ ನ್ಯೂನೆತೆಯ ಆಧಾರದ ಮೇರೆಗೆ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಅದೇರೀತಿ ವಿವಿಧ ಇಲಾಖೆಗಳ ಎಲ್ಲಾ ಅನುಷ್ಠಾನ ಅಧಿಕಾರಿಗಳು ತಮ್ಮ, ತಮ್ಮ ವ್ಯಾಪ್ತಿಯಲ್ಲಿ ಬರುವ ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆಬಗ್ಗೆ ಅನುಷ್ಠಾನ ಗೊಳಿಸುವ ಬಗ್ಗೆ ಮಾಹಿತಿ ನೀಡಲಾಯಿತು.
ಮಕ್ಕಳೇ ದೇಶದ ಆಸ್ತಿ, ದೇಶದ ಜನಸಂಖೆಯ ೪೨% ಮಕ್ಕಳನ್ನು ಹೊಂದಿರುವ ಭಾರತದಲ್ಲಿ ಮಕ್ಕಳು ಪ್ರವರ್ಧಮಾನಕ್ಕೆ ಬರುವ ವರೆಗೆ ಅವರನ್ನು ರಕ್ಷಿಸುವ ಕಾರ್ಯವಾಗಬೇಕು. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿಗಳನ್ನು ಸಂಪೂರ್ಣ ನಿರ್ಮೂಲನೆಯಾಗಬೇಕು.
