ಆರ್.ಡಿ. ಮನೆಗೆ ಜಾಧವ್ ಭೇಟಿ: ಸ್ಪಷ್ಟನೆಗೆ ಪ್ರಿಯಾಂಕ್ ಆಗ್ರಹ
ಕಲಬುರಗಿ,ಏ 18: ಸಾವಿರಾರು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಪಿಎಸ್‍ಐ ಪರೀಕ್ಷೆ ಅಕ್ರಮ ಹಗರಣದ ಆರೋಪಿ ಆರ್.ಡಿ.ಪಾಟೀಲ್ ಮನೆಗೆ ಹೋಗಿ ಬೆಂಬಲ ಕೋರಿ ಬಂದಿರುವ ಬಗ್ಗೆ ಸಂಸದ ಉಮೇಶ್ ಜಾಧವ್ ಸ್ಪಷ್ಟನೆ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಮಾರು 58,000 ಅಭ್ಯರ್ಥಿಗಳು ಪಿಎಸ್ ಐ ಪರೀಕ್ಷೆ ಬರೆದಿದ್ದರು. ಅಕ್ರಮ ಹಗರಣ ಬಯಲಿಗೆ ಬಂದ ನಂತರ ಒಟ್ಟು 114 ಜನರನ್ನು ಬಂಧಿಸಲಾಗಿದೆ. 54 ಅಭ್ಯರ್ಥಿಗಳು ಅದಾಗಲೇ ಆಯ್ಕೆಯಾಗಿದ್ದರು. ಅವರನ್ನು ಕಾಯಂ ಸಸ್ಪೆಂಡ್ ಮಾಡಲಾಗಿದೆ. ಅವರಲ್ಲಿ 24 ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರು. ಹಗಲು ರಾತ್ರಿ ಕಷ್ಟಪಟ್ಟು ಭವಿಷ್ಯದ ಕನಸು ಕಟ್ಟಿಕೊಂಡು ಪರೀಕ್ಷೆ ಬರೆದ ನೈಜ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ ಆರೋಪಿ ಆರ್.ಡಿ. ಪಾಟೀಲ್ ಮನೆಗೆ ಹೋಗಿ ಚುನಾವಣೆಯಲ್ಲಿ ಬೆಂಬಲ ಕೋರಿದ್ದರ ಬಗ್ಗೆ ಹಾಗೂ ರಾಮನವಮಿ ಉತ್ಸವದಲ್ಲಿ ಮತ್ತೊಬ್ಬ ಆರೋಪಿಯ ಜೊತೆ ಜಾಧವ ಭಾಗಿಯಾಗಿರುವ ಕುರಿತು ಸ್ಪಷ್ಟನೆ ನೀಡಬೇಕು. ಮೇಲಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಈ ಬಗ್ಗೆ ರಾಜ್ಯದ ಜನರಿಗೆ ವಿವರಣೆ ನೀಡಬೇಕೆಂದು ಒತ್ತಾಯಿಸಿದರು.
“ಚಿಂಚೋಳಿ ಸಂಸದರು ಹೇಗಾದರೂ ಮಾಡಿ ಮತ ಪಡೆಯಲೇ ಬೇಕು ಎಂದುಕೊಂಡು ಬೆಂಬಲ ಕೇಳಲು ಹೋಗಿದ್ದರೋ ಅಥವಾ ಮೊದಲಿನಿಂದಲೂ ಅವರೊಂದಿಗೆ ಜುಗಲ್ ಬಂಧಿ ಇತ್ತೋ ಗೊತ್ತಿಲ್ಲ. ಅಕ್ರಮದ ಆರೋಪಿ ಆರ್.ಡಿ. ಪಾಟೀಲ್ ಈಗ ಜೈಲಿನಲ್ಲಿದ್ದಾನೆ. ಇವರು ಅಲ್ಲಿಗೆ ಹೋಗಿರುವುದು ನೋಡಿದರೆ ಬಿಜೆಪಿ ಭ್ರಷ್ಟರೊಂದಿಗೆ ಕೈ ಜೋಡಿಸಿದೆ ಎನ್ನುವ ಅನುಮಾನ ಮೂಡುತ್ತದೆ ” ಎಂದು ಆರೋಪಿಸಿದರು.
ಪರೀಕ್ಷೆಗಳಲ್ಲಿ ಅಕ್ರಮವಾದರೆ ಲಕ್ಷಾಂತರ ಜನರಿಗೆ ಪರಿಣಾಮ ಬೀರುತ್ತದೆ. ನೈಜ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಅಕ್ರಮ ಬಯಲಿಗೆ ಬಂದಾಗ ಕಾನೂನು ಪ್ರಕ್ರಿಯೆಗಳು ಮುಗಿಯುವುದರೊಳಗೆ ಬಹಳ ಜನ ಅಭ್ಯರ್ಥಿಗಳು ಮುಂದಿನ ಪರೀಕ್ಷೆ ಬರೆಯಲು ಆಸಕ್ತಿ ಕಳೆದುಕೊಂಡಿರುತ್ತಾರೆ. ಅಲ್ಲದೇ, ಕೆಲವರ ವಯಸ್ಸು ಮುಗಿರುತ್ತದೆ. ಆದರೆ, ಇಂತಹ ಸೂಕ್ಷ್ಮಗಳು ಬಿಜೆಪಿ ನಾಯಕರಿಗೆ ಅರ್ಥವಾಗುವುದಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರೀಕ್ಷೆಗಳಲ್ಲಿ ಅಕ್ರಮ ಸರ್ವೇ ಸಾಮಾನ್ಯವಾಗಿದ್ದವು.ಎಇ, ಜೆಇ, ಕೆಪಿಟಿಸಿಎಲ್ ಸೇರಿದಂತೆ ಪಿಎಸ್ ಐ ಪರೀಕ್ಷೆಗಳಲ್ಲಿ ಅಕ್ರಮ ನಡೆದಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ತಡೆಗೆ ಬಿಲ್ ತಂದಿದ್ದೇವೆ. ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅತ್ಯಂತ ಅಸಮರ್ಥ ಸಚಿವರಾಗಿದ್ದರು. ಆಗ ಅವರೇ ಆರೋಪಿಯೊಬ್ಬರ ಮನೆಗೆ ಹೋಗಿ ಗೋಡಂಬಿ ದ್ರಾಕ್ಷಿ ತಿಂದು ಬಂದಿದ್ದರು. ಈಗ ಜಾಧವ್ ಊಟ ಮಾಡಿ ಬಂದಿದ್ದಾರೆ ಎಂದು ಟೀಕಿಸಿದರು.
ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಾಯಿದೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಕಡೆ ಕಲಬುರಗಿಯ ಬಿಜೆಪಿ ಅಭ್ಯರ್ಥಿ ಭ್ರಷ್ಟಾಚಾರಿಗಳ ಮನೆಗೆ ಹೋಗಿ ಬರುತ್ತಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಲಬುರಗಿಗೆ ಬಂದಾಗ ಈ ಕುರಿತಂತೆ ಜನರಿಗೆ ಉತ್ತರ ನೀಡಬೇಕು ಎಂದು ಪ್ರಿಯಾಂಕ್ ಆಗ್ರಹಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಪ್ರವೀಣ ಹರವಾಳ, ಡಾ ಕಿರಣ ದೇಶಮುಖ, ಫಾರೂಕ್ ಸೇಠ್ , ಪರಶುರಾಮ ನಾಟೀಕಾರ್ ಇದ್ದರು.