ಶ್ರೀ ಸಾಯಿಸ್ಮರಣೆಯಿಂದ ಪಾಪಗಳೆಲ್ಲವೂ ನಾಶ : ಜೋಷಿ
ತಾಳಿಕೋಟೆ:ಏ.18:ಶಿರಡಿಸಾಯಿಬಾಬಾರವರು ಭಕ್ತೋದ್ದಾರ ಜನೋದ್ದಾರ ಮಾಡುತ್ತಾ ಸಾಗಿಬಂದಿದ್ದ ಅವರು ಭಕ್ತರ ಮೇಲಿಟ್ಟ ಪ್ರೀತಿಪ್ರೇಮ ಆತ್ಮೀಯ ಭಾವನೆಗಳುಳ್ಳವುಗಳಾಗಿದ್ದವೆಂದು ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ಸಂತೋಷಭಟ್ ಜೋಷಿ ಅವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ಶಿರಡಿಸಾಯಿಬಾಬಾ ಟ್ರಷ್ಟ್ ವತಿಯಿಂದ ಶಿರಡಿ ಸಾಯಿಬಾಬಾರವರ 20 ನೇ ಜಯಂತ್ಯೋತ್ಸವ ಕುರಿತು ಏರ್ಪಡಿಸಲಾದ ತೊಟ್ಟಿಲು ಕಾರ್ಯಕ್ರಮದಲ್ಲಿ ಎಲ್ಲ ಭಕ್ತಸಮೂಹವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಆಸೆ ಆಕಾಂಕ್ಷೆಗಳನ್ನೊಳಗೊಂಡ ಈ ದೇಹವನ್ನು ಯಾವ ಬೆಂಕಿಯಿಂದ ದಹಿಸಲು ಸಾಧ್ಯವಿಲ್ಲವೋ ಅಂತಹ ಈ ಶರೀರವು ಗುರುವಿನ ಸ್ಮರಣೆಯಿಂದ ನಾಶವಾಗಬಲ್ಲವು ಯಾವ ನಾಸ್ತಿಕರು ದೇವರ ಹೆಸರನ್ನು ಕೇಳಿದರೆ ರೋಷವನ್ನು ಕಾರುತ್ತಾರೆಯೋ ಅಂತವರು ಕೂಡಾ ಶ್ರೀ ಸಾಯಿ ಸ್ಮರಣೆಯಿಂದ ಶಾಂತರಾಗಿ ಪರಿವರ್ತನೆಯಾಗಬಲ್ಲರೆಂದರು. ಶ್ರೀ ಸಾಯಿಬಾಬಾರವರ ದಿವ್ಯದರ್ಶನದಿಂದ ಸಂತೋಷವು ಉಕ್ಕಿ ನಮ್ಮ ಗಂಟಲು ಗದ್ಗದವಾಗುತ್ತದೆ ನೇತ್ರಗಳಿಂದ ಆನಂದ ಭಾಷ್ಪ ಉಕ್ಕುತ್ತದೆ ಅದು ನಮ್ಮಲ್ಲಿ ನಾನೇ ಅವನು ಎಂಬ ಜ್ಞಾನವನ್ನುಂಟುಮಾಡುತ್ತದೆ ನಾನು ನನ್ನದು ಎಂಬುದನ್ನು ನಾನು ನೀನೆಂಬ ವ್ಯತ್ಯಾಸಗಳನ್ನು ದೂರಮಾಡುತ್ತದೆ ಅಲ್ಲದೇ ಸ್ವಾನುಭಾವದ ಅರಿವಾಗುತ್ತದೆ ಎಂದು ಹೇಳಿದ ಜೋಷಿ ಅವರು ಶ್ರೀ ಸಾಯಿಬಾಬಾರವರು ಹೇಳಿದ್ದಾರೆ ತಮ್ಮ ಭಕ್ತರನ್ನು ನಿಂದನೆ ಮಾಡಿದರೆ ಸಹಿಸುವದಾಗುವದಿಲ್ಲಾ ಹಿಂದು ಮುಸ್ಲಿಂ ಎಂಬ ಬೇಧಭಾವ ಬೇಡಾ 1918 ರವರೆಗೆ ವಾಸಿಯಾಗಿದ್ದ ಸಾಯಿಬಾಬಾರವರು ಸದಾಕಾಲ ಭಕ್ತರನ್ನು ರಕ್ಷಿಸುತ್ತೇನೆಂದು ಹೇಳಿದ್ದಾರೆ ಶ್ರೀ ಸಾಯಿಬಾಬಾರವರಿಗೆ ಲಕ್ಷ್ಮೀಂಬಾಯಿಯವರು ಕೊಟ್ಟ 9 ನಾಣ್ಯಗಳನ್ನು ಇನ್ನೂ ಶಿರಡಿಯಲ್ಲಿ ನೋಡಬಹುದಾಗಿದೆ ಅಂದು ಹೊತ್ತಿದ ಅಗ್ನಿಕೊಂಡ ಇನ್ನೂ ಉರಿಯುತ್ತಿದೆ ಎಂದು ತಿಳಿಹೇಳಿದ ಅವರು ಸಾಯಿನಾಮಸ್ಮರಣೆಯಿಂದ ಭಕ್ತರ ದುಃಖ ದೂರ ಹಾಗೂ ಸಂಸಾರದಲ್ಲಿಯ ಭಂಧನಮುಕ್ತ ಪಡೆಯಬಹುದಾಗಿದೆ ಎಂದು ಕೆಲವು ಸಾಯಿಬಾಬಾರವರ ಪವಾಡಗಳ ಕುರಿತು ವಿವರಿಸಿದರು.
ಇನ್ನೋರ್ವ ಹಿರಿಯರಾದ ವೇ.ವಸಂತ ಜೋಶಿ ಅವರು ಶ್ರೀ ಸಾಯಿಬಾಬಾರವರ ಕೆಲವು ಪವಾಡಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಮೊದಲಿಗೆ ಪಟ್ಟಣದ ಶ್ರೀ ನಿಮಿಶಾಂಬಾದೇವಿ ಮಂದಿರದಿಂದ ಪ್ರಾರಂಭಗೊಂಡ ಶ್ರೀ ಸಾಯಿಬಾಬಾರವರ ಪಲ್ಲಕ್ಕಿಉತ್ಸವ ಭಕ್ತಾದಿಗಳ ಭಜನೆ ಹಾಗೂ ವಿವಿಧ ಭಕ್ತಿಯ ಪದಗಳನ್ನು ಹಾಡುವದರೊಂದಿಗೆ ಈ ಮೆರವಣಿಗೆ ಶ್ರೀ ವಾಸವಿ ಕಲ್ಯಾಣ ಮಂಟಪಕ್ಕೆ ತೆರಳಿ ಭಕ್ತಿಮಾರ್ಗದ ಸಭೆಯಾಗಿ ಮಾರ್ಪಟ್ಟಿತು. ನಂತರ ಶ್ರೀ ಸಾಯಿ ಉತ್ಸವ ಮೂರ್ತಿಗೆ ಬಿಲ್ವಾರ್ಚನೆ ಪುಷ್ಪಾರ್ಚನೆ ಮಹಾಮಂಗಳಾರತಿ ಜರುಗಿತಲ್ಲದೇ ನಂತರ ಸುಮಂಗಲೆಯರಿಂದ ಬಾಬಾರವರ ತೊಟ್ಟಿಲು ಕಾರ್ಯಕ್ರಮ ಜರುಗಿತು.
ಈ ಸಮಯದಲ್ಲಿ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತಲ್ಲದೇ ನೂತನವಾಗಿ ಶ್ರೀ ಸಾಯಿಸೇವಾ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಮಂದಿರದ ಕಾರ್ಯ ಕುರಿತು ಮಂದಿರ ನಿರ್ಮಾಣದ ಕುರಿತು ದೊರೆತ ಜಮೀನಿನ ವಿವರಣೆ ಹಾಗೂ ಆಡಳಿತ ಮಂಡಳಿಯವರು ಶ್ರೀ ಸಾಯಿಬಾಬಾರವರ ಮೇಲಿಟ್ಟ ಶ್ರಧ್ದಾ ಭಕ್ತಿಯ ಕುರಿತು ಹಿರಿಯ ಪತ್ರಕರ್ತರು ಹಾಗೂ ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ನಿರ್ಧೇಶಕರಾದ ಶ್ರೀ ಜಿ.ಟಿ. ಘೋರ್ಪಡೆ ಅವರು ಉಪಸ್ತಿತ ಎಲ್ಲ ಭಕ್ತರಿಗೆ ಮನದಟ್ಟುವಂತೆ ವಿವರಿಸಿದರು.
ನಂತರ ಸಮಸ್ತ ಭಕ್ತಾದಿಗಳಿಗೆ ಮಹಾಪ್ರಸಾದ ಜರುಗಿತು.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಗೌರವ ಅಧ್ಯಕ್ಷರಾದ ಡಾ|| ಎಲ್.ಎನ್. ಶೆಟ್ಟಿ, ಅಧ್ಯಕ್ಷರಾದ ಬಿ.ಬಿ. ಮದರಕಲ್ಲ, ಉಪಾಧ್ಯಕ್ಷರಾದ ಎಂ.ಜಿ. ಪಾಟೀಲ, ಕಾರ್ಯದರ್ಶಿ ಸಿ.ಬಿ. ತಿಳಗೂಳ, ಸದಸ್ಯರಾದ ಎಸ್.ಎಸ್. ಸಾಲಂಕಿ, ಜಿ.ಟಿ. ಘೋರ್ಪಡೆ, ಡಿ.ಆರ್. ಲೋಕರೆ, ಎಸ್.ಎಸ್. ದಪ್ಪರದಾರ, ಕೆ.ಸಿ. ಸಜ್ಜನ, ಕೆ.ಆರ್. ಪಾಟೀಲ, ಶಿವಲಿಂಗ ಸಾಲಂಕಿ ಹಾಗೂ ಮಹಾದಾನಿಗಳು ಉಪಸ್ತಿತರಿದ್ದರು.