ಸುಖಿ ರಾಜ್ಯದ ವಾಸ್ತವ ರೂಪಕ ಶ್ರೀರಾಮಚಂದ್ರ: ಹಾರಕೂಡ ಶ್ರೀ
ಬೀದರ್:ಏ.18: ಆದರ್ಶಗಳನ್ನು ಜೀವನ್ಮುಖಿಗೊಳಿಸಿ, ಸುಖಿ ರಾಜ್ಯದ ವಾಸ್ತವ ರೂಪವಾಗಿ ಸಹಸ್ರ ಸಹಸ್ರ ವರ್ಷಗಳಿಂದ ಮಾನವ ಕಲ್ಯಾಣಕ್ಕಾಗಿ ದಿಗ್ದರ್ಶನ ನೀಡುತ್ತಿರುವ ದಾರ್ಶನಿಕತೆಯ ಒಟ್ಟು ಮೌಲ್ಯವೇ ಶ್ರೀರಾಮಚಂದ್ರ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಸುಕ್ಷೇತ್ರ ಹಾರಕೂಡ ಗ್ರಾಮದಲ್ಲಿ ಶ್ರೀ ರಾಮನವಮಿ ನಿಮಿತ್ಯ ಜರುಗಿದ ಧರ್ಮಸಭೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು ತತ್ವಾದರ್ಶಗಳು, ಮಾನವೀಯ ಮೌಲ್ಯಗಳು, ಜನಪರ ಚಿಂತನೆ ಹಾಗೂ ಅನು ಪಾಲನೆ ನಮ್ಮ ಬದುಕಿನ ರೀತಿಯಾದಾಗ ಅದು ಶ್ರೀರಾಮನ ನಿಜವಾದ ಪೂಜೆ ಎನಿಸುತ್ತದೆ.
ಒಂದು ಧರ್ಮ, ದೇಶ, ಕಾಲ ಎಲ್ಲವನ್ನೂ ಮೀರಿದ ನಿಸ್ಸಿಮ ವ್ಯಕ್ತಿತ್ವಧಾರಿಯಾಗಿ, ಪ್ರಜಾ ಪಾಲಕನಾಗಿ ಶ್ರೇಷ್ಠತೆಯನ್ನು ಮೆರೆಯುವ ಧೀಮಂತ ಚೈತನ್ಯಶೀಲ ಶಕ್ತಿಯೇ ರಾಮ.
ಭಾರತೀಯ ಆಧ್ಯಾತ್ಮ ಚಿಂತನೆಗಳು ಯಾವತ್ತೂ ಸತ್ಯದ ತಳಹದಿಯ ಮೇಲೆ ಅನಂತನದೆಡೆಗೆ ಕೊಂಡೊಯ್ಯುವ ಅದ್ಭುತ ಸಾಧನಗಳಾಗಿವೆ.
ದೇಶದ ಯುವಜನತೆ ರಾಮ ಚಾರಿತ್ರ್ಯ ಬಲದ ಮನವರಿಕೆ ಮಾಡಿಕೊಂಡು ಸೌಹಾರ್ದಯುತ ಸಮಾಜ ಕಟ್ಟುವಲ್ಲಿ ವಿಶಿಷ್ಟ ಪಾತ್ರ ವಹಿಸುವುದು ಅನಿವಾರ್ಯವಾಗಿದೆ.
ಈ ನೆಲದ ರಾಮ ಚಿಂತನೆ ಭಾರತವನ್ನಷ್ಟೇ ಅಲ್ಲ ಇಡೀ ವಿಶ್ವಕ್ಕೆ ಮಂಗಳವನ್ನುಂಟು ಮಾಡಲಿ, ಸರ್ವರಿಗೂ ಸೌಖ್ಯದಿಂದ ಬದುಕುವಂತಾಗಲಿ, ರಾಮನವಮಿ ಎಲ್ಲರ ಬಾಳಲ್ಲಿ ನವೋಲ್ಲಾಸದ ಸಿಂಚನಗಯ್ಯಲಿ ಎಂದು ಶುಭ ಹಾರೈಸಿದರು.
ಓಂಕಾರ್ ದರ್ಜಿ, ವಿಠ್ಠಲರಾವ ಸಾಮದೆ, ಶಿವಶರಣಪ್ಪ ಚೌದರಿ, ನಾಗಣ್ಣ ಪೂಜಾರಿ, ಬಸವರಾಜ ಚೌವಾಣ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
ವಿಠಲ ಹೂಗಾರ ನಿರೂಪಿಸಿದರು.
ಮಲ್ಲಪ್ಪ ಖೇಲ್ಡೆ ವಂದಿಸಿದರು.
ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರು ಸದಸ್ಯರು ಸೇರಿದಂತೆ ಗ್ರಾಮದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.