ಮಠ ಮಂದಿರಗಳಿಂದ ಅಭಿವೃದ್ಧಿ, ಮನಸ್ಸಿಗೆ ನೆಮ್ಮದಿ
ರಾಯಚೂರು,ಏ.೧೮- ಶಿವಾನುಭವ, ಆಧ್ಯಾತ್ಮ, ಪುರಾಣ ಪ್ರವಚನ, ಜಾತ್ರಾ ಮಾಹೋತ್ಸವಗಳನ್ನು ಈ ನಾಡಿನಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಮಠ ಮಂದಿರಗಳಿಂದ ಮಾತ್ರ ಅಭಿವೃದ್ಧಿ, ಮನಸ್ಸಿಗೆ ನೆಮ್ಮಧಿ ದೊರೆಯುತ್ತದೆ ಎಂದು ಪೂರ್ಣಿಮಾ ಆಯುರ್ವೇದಿಕ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಎಲ್. ಕೇಶವರೆಡ್ಡಿವರು ಹೇಳಿದರು
ನಗರದ ಆಶಾಪೂರ ರಸ್ತೆಯ ಆಫೀಸರ್ಸ್ ಕಾಲೋನಿಯಲ್ಲಿರುವ ಲಿಂ.ಪೂಜ್ಯಶ್ರೀ ಗುರುಗುಂಟಿ ಮರಿಸ್ವಾಮಿ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ರಾಮ ನವಮಿಯ ಪ್ರಯುಕ್ತ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಸದಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮಹಾ ರಥೋತ್ಸವವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮನುಷ್ಯನಲ್ಲಿ ಕೋಟಿಗಟ್ಟಲೆ ಹಣವಿದ್ದರೂ ನೆಮ್ಮಧಿ ಇರುವುದಿಲ್ಲ ಆದರೆ ಇಂಥ ಜಾತ್ರಾ, ಪುರಾಣ ಪ್ರವಚನಗಳಲ್ಲಿ ಪಾಲ್ಗೊಂಡು ಶ್ರೀಗಳ ಶಿವ ಶರಣರ ಅಮೃತವಾಣಿಯನ್ನು ನಮ್ಮ ಮನಸ್ಸಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮಲ್ಲಿ ಆರೋಗ್ಯ ನೆಮ್ಮಧಿ ಸಿಗಲು ಸಾಧ್ಯವೆಂದು ಹೇಳಿದರು, ಮಾನವರಲ್ಲಿ ಏನಾದರೂ ಅಭಿವೃದ್ಧಿ ಆಗಬೇಕೆಂದರೆ ಮೊದಲು ಮಠ ಮಂದಿರಗಳ ಉದ್ಧಾರವಾಗಬೇಕು ಮಠ ಮಂದಿರಗಳು ಜೀವನಕ್ಕೆ ದಾರಿ ದೀಪವಾಗಿವೆ. ಶರಣ ಸಂತರು ತಮ್ಮ ಸ್ವಂತಕ್ಕಾಗಿ ಏನನ್ನೂ ಬಯಸುವುದಿಲ್ಲ ಸರ್ವವೂ ಭಕ್ತರ ಉದ್ಧಾರಕ್ಕಾಗಿಯೇ ತ್ಯಾಗ ಮಾಡುತ್ತಾರೆ, ಮಠ ಮಾನ್ಯಗಳು ಬೆಳೆದರೆ ಮಾನವವರು ಉದ್ಧಾರವಾದಂತೆ ಎಂದು ಹೇಳಿದರು.
ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಉತ್ಸವ ಮೂರ್ತಿಗೆ ಪೂಜಿಸಿ ದೇವಸ್ಥಾನದ ಸುತ್ತ ಐದು ಪ್ರದರ್ಶನಗಳ ಸೇವೆ ಸಲ್ಲಿಸಿ ನಂತರ ಮಹಾರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕುಂಬಳಕಾಯಿಂದ ಮಹಾ ಮಂಗಳಾರುತಿಯನ್ನು ಬೆಳಗುವುದರ ಮೂಲಕ ಶ್ರೀಗಳು ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ನೂರಾರು ಸದ್ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವವು ಶ್ರೀಗಳ ಪಾದಗಟ್ಟೆಯವರೆಗೆ ತೆರಳಿ ಪೂಜೆ ಸಲ್ಲಿಸಿ ಮರಳಿ ಶ್ರೀಮಠಕ್ಕೆ ತಲುಪಿತು.
ಧರ್ಮ ಸಭೆಯ ಪ್ರಾರಂಭದಲ್ಲಿ ಪ್ರಾರ್ಥನಾ ಗೀತೆಯಾಗಿ ಕು. ವಿಂದ್ಯಾ ಹುಂಡೇಕಾರವರ ಭರತನಾಟ್ಯವನ್ನು ಪ್ರಸ್ತುತ ಪಡಿಸಿ ಸರ್ವ ಸದ್ಭಕ್ತರ ಕಣ್ಮನಗಳನ್ನು ಸೂರೆಗೊಂಡಳು ಜಾತ್ರಾ ಸಂದರ್ಭದಲ್ಲಿ ಆಗಮಿಸಿದ ಸರ್ವ ಸದ್ಭಕ್ತರಿಗೆ ಅನುಕೂಲವಾಗಲೆಂದು ಪೂರ್ಣಿಮಾ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ
ಡಾ. ಸಂತೋಷ, ಡಾ.ಹೇಮಂತ ಪಾಟೀಲ, ಡಾ.ಸುರೇಶ, ಡಾ.ವಂಶಿಯವರಿಂದ ಸರ್ವ ಸದ್ಭಕ್ತರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ಮತ್ತು ಮಾತ್ರೆಗಳ ವಿತರಣೆ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸರ್ವ ಶ್ರೀಗಳಿಗೆ ಹಾಗೂ ಶ್ರೀಮಠದಲ್ಲಿ ಐದು ದಿನಗಳವರೆಗೆ ಸೇವೆ ಸಲ್ಲಿಸಿದ ಭಕ್ತರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಸರ್ವ ಸದ್ಭಕ್ತರು ಮಹಾ ಪ್ರಸಾದವನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಹಬ್ಬಳ್ಳಿ ಬಸವಲಿಂಗ ಮಹಾಸ್ವಾಮಿ, ಅಂಕುಶದೊಡ್ಡಿ, ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿ, ಉಡುಮಗಲ್ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿ, ಕಾಕರಗಲ್ ಹನುಮಂತ್ರಾಯ ಶಾಸ್ತ್ರಿ ಸೇರಿದಂತೆ ಮಠದ ಸರ್ವ ಸದ್ಭಕ್ತರು, ಗುರು ಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.