ಆರ್‌ಡಿ ಮನೆಗೆ ಜಾಧವ್ ಭೇಟಿ: ಸ್ಪಷ್ಟನೆಗೆ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಕಲಬುರಗಿ.ಏ೧೮: ಸಾವಿರಾರು ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಪಿಎಸ್‌ಐ ಪರೀಕ್ಷೆ ಅಕ್ರಮ ಹಗರಣದ ಆರೋಪಿ ಆರ್.ಡಿ.ಪಾಟೀಲ್ ಮನೆಗೆ ಹೋಗಿ ಬೆಂಬಲ ಕೋರಿ ಬಂದಿರುವ ಬಗ್ಗೆ ಸಂಸದ ಉಮೇಶ್ ಜಾಧವ್ ಸ್ಪಷ್ಟನೆ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಮಾರು ೫೮,೦೦೦ ಅಭ್ಯರ್ಥಿಗಳು ಪಿಎಸ್ ಐ ಪರೀಕ್ಷೆ ಬರೆದಿದ್ದರು. ಅಕ್ರಮ ಹಗರಣ ಬಯಲಿಗೆ ಬಂದ ನಂತರ ಒಟ್ಟು ೧೧೪ ಜನರನ್ನು ಬಂಧಿಸಲಾಗಿದೆ. ೫೪ ಅಭ್ಯರ್ಥಿಗಳು ಅದಾಗಲೇ ಆಯ್ಕೆಯಾಗಿದ್ದರು. ಅವರನ್ನು ಕಾಯಂ ಸಸ್ಪೆಂಡ್ ಮಾಡಲಾಗಿದೆ. ಅವರಲ್ಲಿ ೨೪ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರು. ಹಗಲು ರಾತ್ರಿ ಕಷ್ಟಪಟ್ಟು ಭವಿಷ್ಯದ ಕನಸು ಕಟ್ಟಿಕೊಂಡು ಪರೀಕ್ಷೆ ಬರೆದ ನೈಜ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ ಆರೋಪಿ ಆರ್.ಡಿ. ಪಾಟೀಲ್ ಮನೆಗೆ ಹೋಗಿ ಚುನಾವಣೆಯಲ್ಲಿ ಬೆಂಬಲ ಕೋರಿದ್ದರ ಬಗ್ಗೆ ಹಾಗೂ ರಾಮನವಮಿ ಉತ್ಸವದಲ್ಲಿ ಮತ್ತೊಬ್ಬ ಆರೋಪಿಯ ಜೊತೆ ಜಾಧವ ಭಾಗಿಯಾಗಿರುವ ಕುರಿತು ಸ್ಪಷ್ಟನೆ ನೀಡಬೇಕು. ಮೇಲಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಈ ಬಗ್ಗೆ ರಾಜ್ಯದ ಜನರಿಗೆ ವಿವರಣೆ ನೀಡಬೇಕೆಂದು ಒತ್ತಾಯಿಸಿದರು.
ಅಕ್ರಮ ಬಯಲಿಗೆ ಬಂದಾಗ ಕಾನೂನು ಪ್ರಕ್ರಿಯೆಗಳು ಮುಗಿಯುವುದರೊಳಗೆ ಬಹಳ ಜನ ಅಭ್ಯರ್ಥಿಗಳು ಮುಂದಿನ ಪರೀಕ್ಷೆ ಬರೆಯಲು ಆಸಕ್ತಿ ಕಳೆದುಕೊಂಡಿರುತ್ತಾರೆ. ಅಲ್ಲದೇ, ಕೆಲವರ ವಯಸ್ಸು ಮುಗಿರುತ್ತದೆ. ಆದರೆ, ಇಂತಹ ಸೂಕ್ಷ್ಮಗಳು ಬಿಜೆಪಿ ನಾಯಕರಿಗೆ ಅರ್ಥವಾಗುವುದಿಲ್ಲ ಎಂದು ಹೇಳಿದರು.
ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಾಯಿದೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮತ್ತೊಂದು ಕಡೆ ಕಲಬುರಗಿಯ ಬಿಜೆಪಿ ಅಭ್ಯರ್ಥಿ ಭ್ರಷ್ಟಾಚಾರಿಗಳ ಮನೆಗೆ ಹೋಗಿ ಬರುತ್ತಾರೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಲಬುರಗಿಗೆ ಬಂದಾಗ ಈ ಕುರಿತಂತೆ ಜನರಿಗೆ ಉತ್ತರ ನೀಡಬೇಕು ಎಂದು ಪ್ರಿಯಾಂಕ್ ಆಗ್ರಹಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಪ್ರವೀಣ ಹರವಾಳ, ಡಾ ಕಿರಣ ದೇಶಮುಖ, ಫಾರೂಕ್ ಸೇಠ್ , ಪರಶುರಾಮ ನಾಟೀಕಾರ್ ಇದ್ದರು.