ಕರ್ತವ್ಯ ಲೋಪ ಬಿಇಓ ದೊಡ್ಡಮನಿ ಅಮಾನತು
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಏ.೧೮- ಚುನಾವಣಾ ಕರ್ತವ್ಯಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ವರ್ತಿಸಿರುವ ಮಾನವಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಇವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಾನವಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಮನಿ ಇವರನ್ನು ತಾಲ್ಲೂಕುಮಟ್ಟದ ಸಿಎಂಸಿ ತಂಡದ ಸದಸ್ಯರಾಗಿ ಹಾಗೂ ಮತಗಟ್ಟೆ ಕಲ್ಯಾಣಾಧಿಕಾರಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.ಈ ವೇಳೆ ಬಿಇಓ ಚಂದ್ರಶೇಖರದೊಡ್ಡಮನಿ ಅವರು ಚುನಾವಣೆ ಕರ್ತವ್ಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿ ಕರ್ತವ್ಯ ಲೋಪವೆಸಗಿರುವುದು ಸಾಬೀತಾದ ಹಿನ್ನೆಲೆ ಬಿಇಓ ದೊಡ್ಡಮನಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರನಾಯಕ್ ಆದೇಶಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಾದ ನಂತರ ಮಾ. ೧೮ ರಂದು ತಾಲ್ಲೂಕಿನ ಎಲ್ಲ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ತಂಡಗಳ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಗೈರಾಗುವ ಮೂಲಕ ಮತಗಟ್ಟೆ ಕಲ್ಯಾಣಾಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸಿದ್ದರು. ಸಭೆಗೆ ಹಾಜರಾಗುವಂತೆ ದೂರವಾಣಿ ಮೂಲಕ ಸೂಚಿಸಿದರೂ ಸಹ ಸಕಾರಾತ್ಮಕವಾಗಿ ಚುನಾವಣಾ ಕರ್ತವ್ಯಕ್ಕೆ ಸ್ಪಂದಿಸಿರಲಿಲ್ಲ ಹಾಗೂ ಸಭೆಗೆ ವಿಳಂಬವಾಗಿ ಆಗಮಿಸಿ ಮತಗಟ್ಟೆ ಸಿಬ್ಬಂದಿಗಳ ವಿರುದ್ಧವೇ ಏಕವಚನ ಬಳಸಿ ಬೇಜವಾಬ್ದಾರಿಯಿಂದ ವರ್ತಿಸಿದ್ದರು.
ಬಿಇಓ ಚಂದ್ರಶೇಖರ ದೊಡ್ಡಮನಿ ಅವರ ಈ ಎಲ್ಲ ವರ್ತನೆಗಳು ಸಾಬೀತಾದ ಹಿನ್ನೆಲೆ ಕರ್ನಾಟಕ ನಾಗರಿಕ ಸೇವೆ ನಿಯಮದಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ ನಾಯಕ್ ಬಿಇಓ ದೊಡ್ಡಮನಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.