ಯುವಕನ ಸರ ಅಪಹರಣ ಕುಖ್ಯಾತ ಸರಗಳ್ಳ ಸೆರೆ
ಬೆಂಗಳೂರು, ಏ.೧೮-ಕ್ಯಾನ್‌ಗೆ ನೀರು ತುಂಬಿಸುತ್ತಿದ್ದ ಯುವಕನೊಬ್ಬನ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಣಕಾನಗರದ ಅರವಿಂದ್ ಸ್ಕೂಲ್ ರಸ್ತೆಯ ಶ್ರೀಧರ(೨೧)ಬಂಧಿತ ಆರೋಪಿಯಾಗಿದ್ದು, ಈತನ ಜೊತೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕಳೆದ ಮಾ.೧೯ ರಂದು ರಾತ್ರಿ ೧೦-೩೦ರ ವೇಳೆ ಮಾರುತಿನಗರದ ಪ್ರತಾಪ್ ಹೆಚ್.ಎನ್.(೨೨) ಚಕ್ರನಗರ ಮುಖ್ಯರಸ್ತೆಯ ವಾಲ್ಮೀಕಿ ನಗರದಲ್ಲಿರುವ ವಾಟರ್ ಪಾಯಿಂಟ್ ಬಳಿ ಹೋಗಿ ಕ್ಯಾನ್‌ಗೆ ನೀರು ತುಂಬಿಸುತ್ತಿರುವಾಗ ಬಂಧಿತ ಆರೋಪಿ ಸೇರಿ ಇಬ್ಬರು ಬೈಕ್ ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ೧೩ ಗ್ರಾಂ ತೂಕದ ಚಿನ್ನದ ಚೈನ್ ಕಸಿದು ಪರಾರಿಯಾಗಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿ ಶ್ರೀಧರನನ್ನು ಬಂಧಿಸಿ ೮೦ ಲಕ್ಷ ಮೌಲ್ಯದ ೧೩ ಗ್ರಾಂ ಚಿನ್ನದ ಸರ ಹೀರೋ ಫ್ರೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಬ್ಯಾಡರಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ವೀರಣ್ಣ ಎಸ್ ಮರಿ ಮತ್ತವರ ಸಿಬ್ಬಂದಿ ಯಶಸ್ವಿಯಾಗಿದ್ದು,ಆರೋಪಿಯ ಬಂಧನದಿಂದ ಎರಡು ಪ್ರಕರಣಗಳು ಪತ್ತೆಯಾಗಿದೆ ಎಂದರು.