ಡಾ. ಸುಧಾಕರ್ ಪರ ಆರ್.ಅಶೋಕ್ ಮತಯಾಚನೆ
ಗೌರಿಬಿದನೂರು.ಏ.೧೮-ತಾಲ್ಲೂಕಿನ ವಿವಿದೆಡೆಗಳಲ್ಲಿ ಮಂಗಳವಾರ ಎನ್ ಡಿ ಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ರಾಜ್ಯ ನಾಯಕರುಗಳು ಪ್ರಚಾರ ಮಾಡುವ ಮೂಲಕ ಮತಯಾಚನೆ ಮಾಡಿದರು.
ಪ್ರಚಾರ ಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಈ ಚುನಾವಣೆಯು ಸಿದ್ದರಾಮಯ್ಯ ಚುನಾವಣೆಯಲ್ಲ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಮೋದಿ ಗೆಲ್ಲುತ್ತಾರೆ, ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಗೆಲ್ಲುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲಾ ಕಡೆ ಬರಗಾಲ ಬಂದಿದೆ. ಈ ಸರ್ಕಾರ ಹಾಲಿನ ಮೇಲೆ ತೆರಿಗೆ, ವಿದ್ಯುತ್ ಮೇಲೆ ತೆರಿಗೆ, ಮತ್ತು ದಿನನಿತ್ಯ ವಸ್ತುಗಳ ಮೇಲೆ ತೆರಿಗೆ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೋಸ್ಕರ ಮೀಸಲಿಟ್ಟಿರುವ ದುಡ್ಡನ್ನು ಇವರು ಬಿಟ್ಟಿ ಭಾಗ್ಯಗಳಿಗೆ ಬಳಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಚಿಕ್ಕಬಳ್ಳಾಪುರಕ್ಕೆ ಡಾ.ಕೆ.ಸುಧಾಕರ್, ದೇಶಕ್ಕೆ ನರೇಂದ್ರ ಮೋದಿ ರವರನ್ನು ಗೆಲ್ಲಿಸಿದರೆ ಈ ತೆರಿಗೆಯನ್ನು ನಿಲ್ಲಿಸುತ್ತೇವೆ ಎಂದರು.
ಎನ್ ಡಿ ಎ ಅಭ್ಯರ್ಥಿ ಡಾ.ಕೆ.ಸುಧಾಕರ್, ಮಾತನಾಡಿ, ಗೌರಿಬಿದನೂರಿನಲ್ಲಿ ಮೋದಿಯ ಅಲೆ ಬೀಸುತ್ತಿದೆ.
ತಾಲ್ಲೂಕಿನ ವಿದುರಾಶ್ವತ್ಥವನ್ನು ಎರಡನೇ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ಸುಮಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಪುಣ್ಯಭೂಮಿಯಲ್ಲಿ ಈ ದೇಶವನ್ನು ರಕ್ಷಣೆ ಮಾಡಬೇಕು ಮತ್ತು ದೇಶವನ್ನು ಉಳಿಸಬೇಕು. ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತ ನೀಡಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರ ದಲಿತ ಮುಖಂಡರಾದ ಮಂದಕೃಷ್ಣ ಮಾದಿಗ ಮಾತನಾಡಿ, ಈ ಚುನಾವಣೆಯಲ್ಲಿ ಸುಧಾಕರ್ ರವರನ್ನು ಗೆಲ್ಲಿಸಿ ಡೆಲ್ಲಿಗೆ ಕಳುಹಿಸಿ. ದೇಶದಲ್ಲಿ ನರೇಂದ್ರ ಮೋದಿಯನ್ನು ಮೂರನೇ ಸಲ ಪ್ರಧಾನಿಯಾಗಿ ಮಾಡಲು ನಾನು ಈ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ರಾಷ್ಟ್ರ ನಾಯಕ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ವೇಳೆ ವಿಧಾನ ಪರಿಷತ್ತು ಸದಸ್ಯರಾದ ವೈ.ಎನ್.ನಾರಾಯಣಸ್ವಾಮಿ, ಮುಖಂಡರಾದ ಎನ್.ಎಂ.ರವಿನಾರಾಯಣರೆಡ್ಡಿ, ಸಿ.ಆರ್.ನರಸಿಂಹಮೂರ್ತಿ, ಸಿ.ಮಂಜುನಾಥರೆಡ್ಡಿ, ಡಾ.ಎಚ್.ಎಸ್.ಶಶಿಧರ್, ಬಿ.ಎನ್.ರಂಗನಾಥ್, ಕೆ.ನಾಗಭೂಷಣ್ ರಾವ್, ರಮೇಶ್ ರಾವ್ ಶಿಲ್ಕೆ, ಮುರಳಿಧರ್, ಮೋಹನ್, ಮಧುಸೂರ್ಯನಾರಾಯಣ ರೆಡ್ಡಿ, ಕೊಡಿರ್ಲಪ್ಪ, ರಾಘವ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಚಾರ ಸಭೆಗೆ ಗೈರಾದ ಕೆಂಪರಾಜು
ಗೌರಿಬಿದನೂರು ಕ್ಷೇತ್ರದ ಸಮಾಜ ಸೇವಕರಾಗಿದ್ದ ಡಾ.ಕೆ.ಕೆಂಪರಾಜು ಇತ್ತೀಚೆಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅಭ್ಯರ್ಥಿ ಡಾ.ಕೆ.ಸುಧಾಕರ್ ರವರ ಸಮ್ಮುಖದಲ್ಲಿ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು. ಬಳಿಕ ತಾಲ್ಲೂಕಿನ ವಿವಿದೆಡೆಗಳಲ್ಲಿ ಸಂಚರಿಸಿ ತಮ್ಮ ಬೆಂಬಲಿಗರನ್ನು ಬಿಜೆಪಿಗೆ ಬೆಂಬಲಿಸುವಂತೆ ಕರೆ ನೀಡಿದ್ದರು. ಆದರೆ ಮಂಗಳವಾರ ತಾಲ್ಲೂಕಿಗೆ ಎನ್ ಡಿ ಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಡಾ.ಕೆ.ಕೆಂಪರಾಜು ಮತ್ತು ಅವರ ಬೆಂಬಲಿಗರು ಗೈರಾಗಿದ್ದರು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ನಡೆ ಏನು ಎಂಬ ಅನುಮಾನಗಳು ನಿರ್ಮಾಣವಾಗಿವೆ.