ಬಿಜೆಪಿ ಸುಳ್ಳು ದೇಶದ್ರೋಹವಲ್ಲವೆ: ಪುಟ್ಟಸಿದ್ದೇಗೌಡ
ಸಂಜೆವಾಣಿ ನ್ಯೂಸ್
ಮೈಸೂರು: ಏ.18:- ಬರೀ ಸುಳ್ಳು ಆಶ್ವಾಸನೆ ಕೊಟ್ಟು, ಅಭಿವೃದ್ಧಿ ಮಾಡದೇ ಸುಳ್ಳುಗಳನ್ನೇ ಹೇಳುತ್ತಿದ್ದರೆ ಅದು ದೇಶದ್ರೋಹವಲ್ಲದೆ ಮತ್ತೇನೂ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸಿದ್ದೇಗೌಡ ಹೇಳಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು- ಕೊಡಗು, ಚಾಮರಾಜನಗರ ಭಾಗದ ಕಾರ್ಮಿಕ ವಿಭಾಗದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮತದಾರರಿಗೆ ವಂಚಿಸುವ ಕೆಲಸವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಲ್ಲೇ ಬಂದಿದೆ. ದೇಶದ ಸಾಲದ ಬಡ್ಡಿಗೆ ಶೇ.48ರಷ್ಟು ಹಣ ಭರಿಸಬೇಕಾದ ಸ್ಥಿತಿ ಎದುರಾಗಿದೆ. 18 ಸಾವಿರಕ್ಕೂ ಹೆಚ್ಚಿನ ಕಾರ್ಖಾನೆ ಬಿಜೆಪಿ ಅವಧಿಯಲ್ಲಿ ಮುಚ್ಚಿವೆ. ಕಾಂಗ್ರೆಸ್ ಅವಧಿಯ ಬಂದ ಬಳಿಕ 25 ಲಕ್ಷ ರೂ. ಆರೋಗ್ಯ ವಿಮೆ ಜಾರಿಗೆ ತಂದಿದ್ದಾರೆ. ಮಹಿಳೆಯರಿಗೆ 2 ಸಾವಿರ ರೂ. ಕೊಡುವುದನ್ನು ಪ್ರಿಯಾಂಕಗಾಂಧಿ ಆಲೋಚನೆಯಾಗಿದೆ. ಹೀಗೆ ಮಹಿಳೆಯರು ಸೇರಿ ಎಲ್ಲರಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಸಂಘಟಿಸಿ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಪಕ್ಷ ಬಲಿಷ್ಠವಾಗಿದ್ದರೆ ಮಾತ್ರ ಆಡಳಿತದ ಚುಕ್ಕಾಣೆ ಹಿಡಿಯಲು ಸಾಧ್ಯ. ಹೀಗಾಗಿ ಅವಕಾಶಗಳು ಇಂದಲ್ಲಾ ನಾಳೆ ಸಿಗುತ್ತವೆ. ಆದರೆ, ಪಕ್ಷದಲ್ಲಿ ಸಚಿವರು, ಶಾಸಕರಿಗೆ ನೀಡುವ ಆದ್ಯತೆಯನ್ನು ಮುಂಚೂಣೆ ಘಟಕದ ಅಧ್ಯಕ್ಷರಿಗೂ ನೀಡಬೇಕು. ಈ ಕೆಲಸ ಶಾಸಕ, ಸಚಿವರಿಂದಲೂ ಆದಾಗ ಮಾತ್ರ ಮತ್ತಷ್ಟು ಮಂದಿ ಪಕ್ಷ ಗಟ್ಟಿಯಾಗಿ ಉಳಿಯಲು ಸಾಧ್ಯ. ಈ ದಿಸೆಯಲ್ಲಿ ನೀವೆಲ್ಲರೂ ಉತ್ತಮ ರೀತಿಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿ ಎಂದರು.
ಮಾಜಿ ಶಾಸಕ ಬಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಬೂತ್ ಮಟ್ಟದಲ್ಲಿ ಕಾರ್ಮಿಕ ವಿಭಾಗದ ಕಾರ್ಡ್ ಗಳನ್ನು ಹಂಚಿ ಇಲಾಖೆಯಲ್ಲಿನ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ. ಮಾತ್ರವಲ್ಲದೆ ದೇಶದಲ್ಲಿ 25 ಗ್ಯಾರಂಟಿ ಹಾಗೂ 7 ನ್ಯಾಯಯುತ ಭರವಸೆಯ ಪ್ರಣಾಳಿಕೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ನೀವೆಲ್ಲರೂ ಮಾಡಿ. ಇದೂ ದೇಶದ ಚುನಾವಣೆಯಲ್ಲ. ಬದಲಿಗೆ ವಿಶ್ವವೇ ತಿರುಗಿ ನೋಡುತ್ತಿರುವ ಚುನಾವಣೆಯಾಗಿದ್ದು, ಇದರಲ್ಲಿ ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ ಎಂದು ಹೇಳಿದರು.
ಕಾರ್ಮಿಕ ವಿಭಾಗದ ಮೈಸೂರು ಜಿಲ್ಲಾಧ್ಯಕ್ಷ ಮಂಜು ಕೋಟೆ ಸ್ವಾಗತ ಭಾಷಣ ಮಾಡಿದರು. ಮೈಸೂರು ನಗರ ಕಾರ್ಮಿಕ ವಿಭಾಗದ ಅಧ್ಯಕ್ಷ ಷಿಪ್ಟಾನ್, ಚಾ.ನಗರ ಜಿಲ್ಲಾಧ್ಯಕ್ಷ ಮಹೇಶ್, ಕೊಡುಗು ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಹರಿಣಿ ಗೌಡ, ಕಾನೂನು ವಿಭಾಗದ ಸಲಹೆಗಾರ ಧನಂಜಯ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನರೇಂದ್ರ, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಕಾಮಾಕ್ಷಿ ಗೌಡ ಇತರರು ಹಾಜರಿದ್ದರು.