ಕುಮಾರಸ್ವಾಮಿಯವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ: ಬಿ.ವೈ.ವಿಜಯೇಂದ್ರ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.18: ಮಂಡ್ಯ ಲೋಕಸಬಾ ಕ್ಷೇತ್ರದಲ್ಲಿಂದು ಹಣ ಬಲ ಮತ್ತು ಜನಬಲದ ನಡುವೆ ಚುನಾವಣೆ ನಡೆಯುತ್ತಿದೆ ಕಾಂಗ್ರೆಸ್ ಪಕ್ಷ ಹಣ ಬಲವುಳ್ಳ ಗುತ್ತಿಗೆದಾರನೊಬ್ಬನನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದ್ದರೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಜನ ನಾಯಕನಾದ ಜೆಡಿಎಸ್ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನಿಮ್ಮ ಮುಂದೆ ಅಭ್ಯರ್ಥಿಯನ್ನಾಗಿ ತಂದು ನಿಲ್ಲಿಸಿದೆ. ಜನ ಬಲದ ನಾಯಕ ಕುಮಾರಸ್ವಾಮಿ ಅವರನ್ನು ಅತ್ಯಧಿಕ ಬಹುಮತದಿಂದ ಜಿಲ್ಲೆಯ ಜನ ಚುನಾಯಿಸಿ ಲೋಕಸಭೆಗೆ ಕಳುಹಿಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಆಶೀರ್ವಾದ ಮಾಡುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳು ಆಯೋಜಿಸಿದ್ದ ಬೃಹತ್ ಬಹಿರಂಗಸಭೆಯಲ್ಲಿ ಮಾತನಾಡಿ ಅವರು ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಸ್ಪರ್ಧಿಸಲು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕರೆ ತಂದವರು ನಾವು. ಜಿಲ್ಲೆಯ ಪ್ರಜ್ಞಾವಂತ ಮತದಾರರು ಮತ್ತು ತಾಯಂದಿರು ತಮ್ಮ ಮತವನ್ನು ಆಸೆ ಆಮಿಷಗಳಿಗೆ ಮಾರಿಕೊಳ್ಳುವವರಲ್ಲ ಎಂದ ವಿಜಯೇಂದ್ರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ ಎಂದರು. ಕಳೆದ ಉಪ ಚುನಾವಣೆಯ ಸಂದರ್ಭದಲ್ಲಿ ನಾನು ಕೆ.ಆರ್.ಪೇಟೆ ಉಸ್ತುವಾರಿ ತೆಗೆದುಕೊಂಡಿದ್ದೆ. ಅಂದು ನಮ್ಮ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರನ್ನು ಗೆಲ್ಲಿಸಿಕೊಟ್ಟರೆ ಕ್ಷೇತ್ರದ ಅಭಿವೃದ್ದಿ ಮಾಡುವುದಾಗಿ ಮಾತು ಕೊಟ್ಟಿದ್ದೆ. ಅದರಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೆ.ಸಿ.ನಾರಾಯಣಗೌಡರನ್ನು ಸಚಿವರನ್ನಾಗಿ ಮಾಡಿ 1800 ಕೋಟಿಗೂ ಅಧಿಕ ಅನುದಾನ ನೀಡಿ ಕ್ಷೇತ್ರದ ಅಭಿವೃದ್ದಿ ಮಾಡಿದ್ದೇವೆ ಎಂದ ವಿಜಯೇಂದ್ರ ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಈಗಾಗಲೇ 800ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳಿಗೆ ರೈತರ ಆತ್ಮಹತ್ಯೆಗಳು ಕಣ್ಣಿಗೆ ಕಾಣುತ್ತಿಲ್ಲ. ತೀವ್ರ ಬರಗಾಲದಿಂದ ರೈತರ ಬದುಕು ನಾಶವಾಗುತ್ತಿದ್ದರೂ ಒಂದೇ ಒಂದು ನಯಾಪಯಸೆ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಅಭಿವೃದ್ದಿ ಶೂನ್ಯ ಸರ್ಕಾರ ಇದೆ ಎಂದು ಕಿಡಿಕಾರಿದರು.
ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿ.ಜೆಪಿ ಮುಖಂಡ ನಂಜುಂಡೇಗೌಡ, ಜೆಡಿಎಸ್ ಮುಖಂಡ ಅಬ್ಬಾಸ್ ಆಲಿ ಬೂಹ್ರಾ ಸಭೆಯಲ್ಲಿ ಮಾತನಾಡಿ ಹೆಚ್.ಡಿ.ಕೆ ಪರ ಮತಯಾಚನೆ ಮಾಡಿದರು.