ಮಂಡ್ಯ ಜಿಲ್ಲೆಯ ಜನ ರಾಜಕೀಯ ಶಕ್ತಿ ನೀಡಿದ್ದಾರೆ: ಹೆಚ್.ಡಿ.ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.18: ನನಗೆ ಹಾಸನ ಜನ್ಮ ಭೂಮಿಯಾದರೆ ರಾಮನಗರ ರಾಜಕೀಯ ಜನ್ಮ ಭೂಮಿ ಆದರೆ ಮಂಡ್ಯ ಜಿಲ್ಲೆಯ ಜನತೆ ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ನೀಡಿ ಹರಸಿದೆ ಮಂಡ್ಯ ಜಿಲ್ಲೆಯ ಜನ ನನ್ನನ್ನು ತಮ್ಮ ಮನೆಯ ಮಗನಂತೆ ನೋಡಿಕೊಂಡಿದೆ ಎಂದು ಮಂಡ್ಯ ಲೋಕಸಭೆಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳು ಆಯೋಜಿಸಿದ್ದ ಬೃಹತ್ ಬಹಿರಂಗಸಭೆಯಲ್ಲಿ ಮಾತನಾಡಿ ಅವರು ಮತಯಾಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎನ್.ಚಲುವರಾಯಸ್ವಾಮಿ ಅವರು ನನ್ನನ್ನು ಸೋಲಿಸುವಂತೆ ಕರೆ ನೀಡಿದ್ದಾರೆ ಇವರಿಗೆ ನನ್ನನ್ನು ಸೋಲಿಸುವ ತಾಕತ್ತಿಲ್ಲದೆ ಮಂಡ್ಯಕ್ಕೆ ರಾಹುಲ್ ಗಾಂಧಿಯನ್ನು ಕರೆತಂದಿದ್ದಾರೆ ನನ್ನನ್ನು ಸೋಲಿಸುವ ಶಕ್ತಿ ಇವರುಗಳಿಗಿಲ್ಲ ಅದೇನಿದ್ದರು ಮಂಡ್ಯ ಜಿಲ್ಲೆಯ ಜನರಿಗೆ ಮಾತ್ರ ಇದೆ ಎಂದ ಹೆಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ಒಂದು ಅವಧಿ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು ಒಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರೂ ಮುಖ್ಯಮಂತ್ರಿ ಆಗಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ಕೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ಉಪ ಮುಖ್ಯಮಂತ್ರಿ ಮಾಡಿ ನಿಮ್ಮ ಕೈಗೆ ಪೆನ್ನು ಪೇಪರ್ ಕೊಟ್ಟ ಪರಿಣಾಮ ನಮ್ಮ ನೀರು ನಮ್ಮ ಹಕ್ಕು ಆಗುವ ಬದಲು ನಮ್ಮ ನೀರು ತಮಿಳರ ಹಕ್ಕಾಗಿದೆ ಎಂದು ಛೇಡಿಸಿದರು.
ನಾನು ಮತ್ತು ನನ್ನ ಕುಟುಂಬ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ. ನಾನು ನಮ್ಮ ತಾಯಂದಿರ ಬಗ್ಗೆ ಎಂದಿಗೂ ಲಘುವಾಗಿ ಮಾತನಾಡಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದೇನೆ. ನಮ್ಮ ತಾಯಂದಿರ ಕಾತೆಗೆ ಎರಡು ಸಾವಿರ ಹಣ ಹಾಕಿ ಪರೋಕ್ಷವಾಗಿ ಕುಟುಂಬದ ಯುಜಮಾನರ ಮೂಲಕ ಮಸಿಕ 5-6 ಸಾವಿರ ವಸೂಲಿ ಮಾಡಲಾಗುತ್ತಿದೆ. 25 ರೂ ಇದ್ದ ಒಂದು ಬಾಟಲ್ ಮದ್ಯದ ಬೆಲೆಯನ್ನು 250 ರೂಗಳಿಗೆ ಏರಿಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕರ 1.05 ಲಕ್ಷ ಸಾವಿರ ಕೋಟಿ ಸಾಲ ಮಾಡಿದೆ. ಇದನ್ನು ತೀರಿಸುವರ?ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ನನ್ನ ಕೊನೆ ಚುನಾವಣೆ ಎನ್ನುತ್ತಿದ್ದಾರೆ. ಜನರ ತಲೆಯ ಮೇಲೆ ಸಾಲ ಹೊರಿಸಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ.ನನ್ನ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ಸಿಗರು ಅಪಪ್ರಚಾರ ಮಡುತ್ತಿದ್ದಾರೆ. ತಾಯಂದಿರೇ ಎರಡು ಸಾವಿರದ ಆಸೆಗೆ ಬಲಿಯಾಗಬೇಡಿ. ತಾಯಂದಿರೂ ಎಂದಿಗೂ ಕೈತುಂಬ ನೀಡುವವರಾಗಬೇಕೇ ಹೊರತು ಕೈಯೊಡ್ಡುವವರಾಗಬಾರದು ಎನ್ನುವುದು ನನ್ನ ಆಸೆ. ಮಹಿಳೆಯರ ಸ್ವಯಂ ಆರ್ಥಿಕ ಸಭಲೀಕರಣ ನನ್ನ ಕನಸು. ತಾಯಂದಿರ ಮನವಿಗೆ ಸ್ಪಂಧಿಸಿ ನಾನು ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿದೆ. ರೈತರ ಮನೆ ಹಾಳಾಗಬಾರದೆನ್ನುವ ಕಾರಣದಿಂದ ಲಾಟರಿ ನಿಷೇಧ ಮಾಡಿದೆ. ರಾಜ್ಯದಲ್ಲಿ ಬೆಟ್ಟಿಂಗ್ ದಂದೆ ನಿರಾಂತಕವಾಗಿ ನಡೆಯುತ್ತಿದೆ. ಬೆಟ್ಟಿಂಗ್ ದಂದೆಯ ಪರಿಣಾಮ ಈ ಹಿಂದೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಒಬ್ಬ ಬಾಲಕನ ಕೊಲೆಯಾಗಿರಲಿಲ್ಲವೇ? ಬೆಟ್ಟಿಂಗ್ ದಂದೆಯಿಂದ ಯುವ ಸಮುದಾಯ ಹಾಳಾಗುತ್ತಿದ್ದರೂ ಅದನ್ನು ನೋಡಿಕೊಂಡು ರಾಜ್ಯ ಸರ್ಕಾರ ಕುಳಿತಿದೆ. ಇಂತಹ ದರಿದ್ರ ಸರ್ಕಾರ ನಿಮಗೆ ಬೇಕಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ರಾಜ್ಯದಲ್ಲಿ ಬರಗಾಲ ಬರುತ್ತದೆ ಮತ್ತು ರೈತರ ಆತ್ಮಹತ್ಯೆಗಳು ಆರಂಭವಾಗುತ್ತವೆಂದರು.
ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಹಿಂದೆ ಮಂಡ್ಯ ಜಿಲ್ಲೆಯ ಜನರ ಕೊಡುಗೆ ಇದೆ. ನಮ್ಮ ಕುಟುಂಬ ಬದುಕಿರುವವರೆಗೂ ಜಿಲ್ಲೆಯ ಜನರ ಋಣ ತೀರಿಸಲು ಸಾಧ್ಯವಿಲ್ಲ. ದೇವೇಗೌಡರ ಹೋರಾಟದ ಫಲವಾಗಿಯೇ ಹಾಸನದ ಗೊರೂರು ಜಲಾಶಯ ನಿರ್ಮಾಣವಾಯಿತು. ಇದರಿಂದ ಬರಡು ಪ್ರದೇಶವಾಗಿದ್ದ ಮಂಡ್ಯ ಜಿಲ್ಲೆಯ ಕೆಲವು ಭಾಗಗಳು ನೀರು ಕಂಡವು. ದೇವೇಗೌಡರ ನೀರಾವರಿ ಹೋರಾಟದ ಶಕ್ತಿಯ ಫಲವಾಗಿಯೇ ನಮಗೆ ರಾಜಕೀಯ ಅಧಿಕಾರ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಅನಂತರ ಮಂಡ್ಯ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ 98 ಅಡಿ ನೀರಿದ್ದರೂ ಅದನ್ನು ರೈತರ ಬೆಳೆ ಸಂರಕ್ಷಣೆಗೆ ಬಿಡುಗಡೆ ಮಾಡಿಲ್ಲ. ಮಳವಳ್ಳಿ ಮತ್ತು ಮದ್ದೂರು ಭಾಗದಲ್ಲಿ ರೈತರ ಕಬ್ಬಿನ ಗದ್ದೆಗಳು ನೀರಿಲ್ಲದೆ ಒಣಗಿ ನಿಂತಿವೆ. ಮಂಡ್ಯ ಜಿಲ್ಲೆಗೆ ಕುಮಾರಣ್ಣ ಯಾರು ಎಂದು ಪ್ರಶ್ನಿಸುವವರು ಜಿಲ್ಲೆಯ ರೈತರ ಬಗ್ಗೆ ಕನಿಷ್ಠ ಕಾಳಜಿ ತೋರಿಸಿದ್ದರೆ ಒಣಗಿ ನಿಂತಿರುವ ಕಬ್ಬಿನ ಬೆಳೆಯನ್ನು ರೈತರು ಸಂರಕ್ಷಿಸಿಕೊಳ್ಳುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ರಾಜ್ಯದ ಜನ ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಆದರೆ ಈ ಹಿಂದೆ ರಾಜ್ಯದಲ್ಲಿ ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ರೈತರು ಆತ್ಮಹತೆ ಮಾಡಿಕೊಂಡರು. ಆತ್ಮಹತ್ಯೆ ಮಾಡಿಕೊಂಡ ರೈತರ ನೆರವಿಗೆ ರಾಜ್ಯ ಸರ್ಕಾರ ಬರಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟಂಬಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿ ಸಾಂತ್ವನ ಹೇಳಿದವನು ನಾನು. ನಿಮ್ಮ ಕುಟುಂಬದ ಅಣ್ಣ ಅಥವಾ ತಮ್ಮ ಎಂಬ ಭಾವನೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನಗೆ ಮತನೀಡಿ. ಮೈತ್ರಿ ಸರ್ಕಾರದಲ್ಲಿ ನಾನು ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂದು ತೆಗೆದು ನೋಡಲಿ. ಜಿಲ್ಲೆಗೆ ಹೆಚ್ಚು ಅನುದಾನ ನೀಡಿದರೆ ಮಂಡ್ಯ ಬಜೆಟ್ ಎಂದು ಟೀಕಿಸಿದ ಕಾಂಗ್ರೆಸ್ಸಿಗರಿಗೆ ಈಗ ಮತ ಕೇಳಲು ಯಾವ ನೈತಿಕತೆ ಇದೆ. ಲೋಕಸಭೆಗೆ ಹೋಗಿ ಸ್ಥಾನಮಾನ ಪಡೆಯಬೇಕು ಎಂಬ ಆಸೆಯಿಲ್ಲ. ನಿಮ್ಮ ಕೆಲಸ ಹಾಗೂ ನಾಡಿನ ರೈತರ ನೀರಿನ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು. ಉತ್ತರ ಕಾರ್ನಾಟಕದ ಕೃಷ್ಣ, ಮಹಾದಾಯಿ ಯೋಜನೆಗಳಿಗೆ ಪ್ರತಿಫಲ ಹುಡುಕಬೇಕಿದೆ. ಪ್ರಧಾನಿ ಮೋದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ 2.75 ಲಕ್ಷ ಉದ್ಯೋಗಳು ಖಾಲಿಯಿವೆ. ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಠಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಮೊದಲು ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ವಿ.ಸಿ ನಾಲೆ ಆಧುನೀಕರಣಕ್ಕೆ ಅಗತ್ಯ ಹಣ ನೀಡಿದವನು ನಾನು. ರೈತ ಸಮುದಾಯಕ್ಕೆ ತೊಂದರೆಯಾಗದಂತೆ ನಾಲೆಯಲ್ಲಿ ನೀರು ನಿಲ್ಲಿಸದೆ ಕಾಮಗಾರಿ ನಡೆಸುವಂತೆ ನಾನು ಸೂಚಿಸಿದ್ದೆ. ಇದೀಗ ರಾಜ್ಯ ಸರ್ಕಾರ ನಾಲಾ ಆಧುನೀಕರಣದ ಹೆಸರಿನಲ್ಲಿ ವಿ.ಸಿ ನಾಲೆಯಲ್ಲಿ ನೀರು ನಿಲ್ಲಿಸಿ ರೈತರಿಗೆ ತೊಂದರೆ ಕೊಟ್ಟಿದೆ. ಜೊತೆಗೆ ವಿ.ಸಿ ನಾಲೆ ಅಧುನೀಕರಣದ ಗುತ್ತಿಗೆದಾರ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು. ಗುತ್ತಿಗೆದಾರನ ರೈತರ ಹಿತ ನಿಮ್ಮ ಕಣ್ಣಮುಂದೆಯೇ ಇದೆ ಎಂದು ಕುಮಾರಸ್ವಾಮಿ ಹೇಳಿದರು.