ಮತದಾನ ಪ್ರತಿಯೊಬ್ಬ ನಾಗರಿಕರ ಮೂಲಭೂತ ಹಕ್ಕು: ಸುರೇಶ ಜತ್ತಿ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.18:ಹೊಸ ಹೊಸ ಆಲೋಚನೆಗಳು, ದಿನಕ್ಕೊಂದು ಆವಿಷ್ಕಾರಗಳೊಂದಿಗೆ ಶರವೇಗದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಭಾರತ ದೇಶದ ಏಳಿಗೆಗಾಗಿ ದಕ್ಷ ಹಾಗೂ ಪ್ರಾಮಾಣಿಕ ನಾಯಕನ ಅವಶ್ಯಕತೆ ಇದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ತಪ್ಪದೇ ಮತದಾನ ಮಾಡುವುದರ ಮೂಲಕ ಯೋಗ್ಯ ವ್ಯಕ್ತಿಯನ್ನು ಆರಿಸಿ ನಮ್ಮ ನಾಡಿನ ಹಾಗೂ ದೇಶದ ಪ್ರಗತಿಗೆ ಸಹಕರಿಸಲು ಪ್ರಯತ್ನಿಸೋಣ ಎಂದು ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್‍ನ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಹೇಳಿದರು.
ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸ್ ಆವರಣದಲ್ಲಿ ಪಾಲಕರಿಗಾಗಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಭವ್ಯ ಭಾರತಕ್ಕಾಗಿ ಬದಲಾವಣೆ ಅವಶ್ಯ, ಪಕ್ಷ ಯಾವುದೇ ಇರಲಿ ಯೋಗ್ಯ, ಅಭಿವೃದ್ಧಿಯ ಹರಿಕಾರ, ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಗ್ಯ ವ್ಯಕ್ತಿಯನ್ನು ಉತ್ತಮ ಸಮಾಜಕ್ಕಾಗಿ ಆಯ್ಕೆ ಮಾಡುವುದು ಪ್ರತಿಯೊಬ್ಬ ಜವಾಬ್ದಾರಿ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ಬರುವ ಲೋಕಸಭೆ ಚುನಾವಣೆಯಲ್ಲಿ ತಾವೆಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ಪಾಲಕರಿಗೆ ವಿನಂತಿಸಿದರು.
ಸಂಸ್ಥೆಯ ಕಾರ್ಯದರ್ಶಿ ನೀಲಾ ಜತ್ತಿ ಮಾತನಾಡಿ, ಜಗತ್ತಿನಲ್ಲಿ ಭವ್ಯ ಭಾರತವಾಗಿ ಗುರುತಿಸಿಕೊಂಡಿರುವ ಭಾರತ ದೇಶವನ್ನು ಮುನ್ನಡೆಸಿಕೊಂಡು ಹೋಗುವ ದಕ್ಷ, ಪ್ರಾಮಾಣಿಕ ಹಾಗೂ ನಿಸ್ವಾರ್ಥ ನಾಯಕರನ್ನು ಮತದಾನದ ಮೂಲಕ ಆರಿಸಿಕೊಡುವ ನೀವುಗಳೇ ದೇಶದ ನಿಜವಾದ ನಾಯಕರು ಎಂದು ಹೇಳಿದರು.
ಮುಖ್ಯ ಗುರುಮಾತೆ ಸುಚಿತ್ರ ಹೊಸಮನಿ, ಸೌಮ್ಯ ಗಲಗಲಿ, ರಾಜೇಶ್ವರಿ ಮುಳಜಿ, ರೂಪಾ ಹಲಗಣಿ, ಅಮೃತ ಗುಜಗೊಂಡ, ಆಫ್ರಿನ್ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.