ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ : ಡಾ. ಕೃಷ್ಣರಾಜ ಸೂಚನೆ
ಅಥಣಿ:ಏ.18: ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟದ ತೋಟದ ವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿದ್ದು, ತಾಲೂಕ ತಹಶೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಬೆಳಗಾವಿಯ ಯೋಜನಾ ನಿರ್ದೇಶಕ ಡಾ. ಕೃಷ್ಣರಾಜ ಖಡಕ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ಸಾಯಂಕಾಲ ಇಲ್ಲಿನ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ 23 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 38 ಹಳ್ಳಿಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರನ್ನು ಪೂರೈಸಲಾಗುತ್ತಿದ್ದು, ಪ್ರತಿದಿನ 250ಕ್ಕೂ ಅಧಿಕ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆ ಪಡೆದುಕೊಂಡ ಟ್ಯಾಂಕರ್ ಮಾಲೀಕರಿಗೆ 5 ಕಿ.ಮೀ ಒಳಗೆ 800 ರೂ. 10 ಕಿ.ಮೀ ಒಳಗೆ 900 ರೂ. ನೀಡಲಾಗುತ್ತಿದೆ. ಆದರೂ ಕೂಡ ಇನ್ನೂ ಅನೇಕ ತೋಟದ ವಸತಿ ಜನರು ಸಕಾಲಕ್ಕೆ ನೀರು ಪೂರೈಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ತಾಲೂಕ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಚುನಾವಣೆ ಕರ್ತವ್ಯದ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಕೂಡ ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಸಮನ್ವತೆಯಿಂದ ಸಮಸ್ಯೆ ಬಗೆಹರಿಸಬೇಕೆಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ 10 ಕಿ.ಮೀ ವ್ಯಾಪ್ತಿಯಲ್ಲಿ ಕುಡಿಯುವ ನೀರು ದೊರಕುತ್ತಿಲ್ಲ, 15 ರಿಂದ 20 ಕಿಲೋಮೀಟರ್ ದೂರದಿಂದ ನೀರು ತಂದು ಪೂರೈಸಬೇಕಾಗಿದೆ. ಇದಲ್ಲದೆ ನೀರಿಗಾಗಿಯೂ ಕೂಡ ಹಣ ನೀಡಬೇಕಾಗಿರುವುದರಿಂದ ನಾವು ಪಡೆದುಕೊಂಡಿರುವ ಟೆಂಡರ್ ಗುತ್ತಿಗೆಗೆ ಹೊಂದಾಣಿಕೆಗೆ ಆಗುವುದಿಲ್ಲ. ಇದರಿಂದ ನಮಗೆ ಭಾರಿ ನಷ್ಟವಾಗುತ್ತದೆ. 10 ಕಿ.ಮೀ ನಂತರದ ಅಂತರಕ್ಕೆ ಹೆಚ್ಚುವರಿ ದರವನ್ನು ನೀಡಬೇಕು. ಕಳೆದ 20 ದಿನಗಳಿಂದ ನಮಗೆ ಬರಬೇಕಾದ ಬಾಕಿ ಬಿಲ್ಲನ್ನ ಕೂಡಲೇ ಪೂರೈಸಬೇಕೆಂದು ಟ್ಯಾಂಕರ್ ಮಾಲೀಕರು ಅಧಿಕಾರಿಗಳನ್ನು ಒತ್ತಾಯಿಸಿದರು. ಟ್ಯಾಂಕರ್ ಮಾಲೀಕರ ಜೊತೆ ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಯೋಜನಾ ನಿರ್ದೇಶಕರು ಬಾಕಿ ಉಳಿದಿರುವ ಟ್ಯಾಂಕರ್ ಬಿಲ್ಲನ್ನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ತಾಲೂಕ ಅಧಿಕಾರಿಗಳು ಸಹಿ ಮಾಡಿ ಬಿಲ್ಲನ್ನ ಪಾಸ್ ಮಾಡಿದ ಪ್ರಸಂಗ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕ ತಹಶೀಲ್ದಾರ್ ವಾಣಿ ಯು, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಭಿಯಂತರ ವೀರಣ್ಣ ವಾಲಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ರವೀಂದ್ರ ಮರಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.