ಇಂದಿರಾ ಆವಾಸ್ ಮನೆ ಹಂಚಿಕೆ ಅಕ್ರಮ: ಐವರಿಗೆ ಶಿಕ್ಷೆ
ಕಲಬುರಗಿ,ಏ.17: ಕಳೆದ 2009 -10ನೆಯ ಇಸವಿಯಲ್ಲಿ ಚಿಂಚೋಳಿ ತಾಲೂಕಿನ ಚೇಂಗಟಾ ಗ್ರಾಮಪಂಚಾಯತಿಯಲ್ಲಿ ಇಂದಿರಾ ಆವಾಸ ಯೋಜನೆಯ ಮನೆಗಳ ಹಂಚಿಕೆಯಲ್ಲಿ ಸುಳ್ಳು ಕಾಗದ ಪತ್ರ ಸೃಷ್ಟಿಸಿ ಸರಕಾರಕ್ಕೆ ಮೋಸ ಮಾಡಿದ ಅರೋಪ ಸಾಬೀತಾದ್ದರಿಂದ ಚೇಂಗಟಾ ಮತ್ತು ಹೊನ್ನಬಟ್ಟಿ ತಾಂಡಾದ ಐವರಿಗೆ ಚಿಂಚೋಳಿಯ ಜೆಎಂಎಫ್‍ಸಿ ನ್ಯಾಯಾಲಯವು ವಿವಿಧ ಪ್ರಮಾಣದ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದೆ.
ಆಗಿನ ಗ್ರಾಪಂ ಅಧ್ಯಕ್ಷ ಜ್ಯೋತಿ ರವಿ ರಾಠೋಡ ( 6 ತಿಂಗಳು ಸಾದಾ ಜೈಲುಶಿಕ್ಷೆ, 50 ಸಾವಿರ ರೂ ದಂಡ), ಉಪಾಧ್ಯಕ್ಷ ಬಾಬು ಸೋಮು ಪವಾರ,( 6 ತಿಂಗಳು ಸಾದಾ ಜೈಲು ಶಿಕ್ಷೆ,40 ಸಾವಿರ ರೂ ದಂಡ)ಪಿಡಿಒ ಅಶೋಕ ಚನ್ನಪ್ಪ ಪಡಶೆಟ್ಟಿ,( 1 ವರ್ಷ ಸಾದಾ ಜೈಲುಶಿಕ್ಷೆ ,90 ಸಾವಿರ ರೂ ದಂಡ , ಫಲಾನುಭವಿಗಳಾದ ಖ್ಯಾದಮ್ಮ ಶಂಕ್ರೆಪ್ಪ ಕಣ್ಣಿ ,ಮತ್ತು ಸುವರ್ಣ ಅಂಬಾರಾಯ ಕಣ್ಣಿ ( ತಲಾ 5 ಸಾವಿರ ರೂ ) ಶಿಕ್ಷೆಗೆ ಒಳಗಾದವರು.
ಇಂದಿರಾ ಆವಾಸ ಯೋಜನೆ ( 2009 -10 ನೇ ಸಾಲಿನಲ್ಲಿ ) ಯಲ್ಲಿ ಗ್ರಾಪಂನ ಮೂವರು ಅಧಿಕಾರಸ್ಥರು ,ಆರು ಜನ ಫಲಾನುಭವಿಗಳು ಸೇರಿ ಮನೆ ನಿರ್ಮಿಸದಿದ್ದರೂ ಮನೆ ನಿರ್ಮಿಸಿದಂತೆ ಸುಳ್ಳು ಕಾಗದ ಪತ್ರ ಸೃಷ್ಟಿಸಿದ್ದರು.
ರಟಕಲ್ ಪೊಲೀಸರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಚಿಂಚೋಳಿಯ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ದತ್ತಕುಮಾರ ಅವರು ವಾದ ವಿವಾದ ಪರಿಶೀಲಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.