ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ: ಗ್ರಾಹಕರ ಪರದಾಟ

ಸಂಜೆವಾಣಿ ವಾರ್ತೆ
ದಾವಣಗೆರೆ ಏ.17; ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದಲ್ಲಿನ ಕರ್ಣಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿ ಕೊರತೆ ಪರಿಣಾಮ, ಗ್ರಾಹಕರು ಸಮರ್ಪಕ ಸೇವೆ ಲಭಿಸದೇ ಪರದಾಡುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಬ್ಯಾಂಕ್‌ನಲ್ಲಿ ಹಣಪಾವತಿ, ಹಿಂಪಡೆಯುವುದು, ಪಾಸ್‌ಬುಕ್‌ ವಿವರ ಮುದ್ರಣ, ಆಧಾರ್‌ ಜೋಡಣೆ, ಖಾತೆ ತೆರೆಯಲು ಅರ್ಜಿ ಸ್ವೀಕರಿಸಲು ಸರಿಯಾದ ಕೌಂಟರ್‌ಗಳ ವ್ಯವಸ್ಥೆಯಿಲ್ಲ. ಇದ್ದರೂ ಸೂಕ್ತವಾದ ಫಲಕ ಹಾಕಿಲ್ಲ. ಸಿಬ್ಬಂದಿಯೂ ಸಮರ್ಪಕವಾಗಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಹೆಚ್ಚಿನ ಗ್ರಾಹಕರು ಪಾವತಿ ಮತ್ತು ಹಿಂಪಡೆಯುವ ಇತರೆ ಸೇವೆಗಳ ಬಗ್ಗೆ ಮಾಹಿತಿ ಇಲ್ಲದೇ ಸರದಿ ಸಾಲಿನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿದೆ. ಕೌಂಟರ್‌ ಬಳಿ ಹೋದಾಗ ಅಲ್ಲಿನ ನೌಕರರು ಬೇರೆ ಕೌಂಟರ್‌ನಲ್ಲಿ ನಿಲ್ಲಿ ಎಂದು ತಿಳಿಸುತ್ತಾರೆ. ಇದರಿಂದ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ ಎಂಬುದು ಗ್ರಾಹಕರ ಆರೋಪ.ಬ್ಯಾಂಕ್‌ನಲ್ಲಿ ದೈನಂದಿನ ವ್ಯವಹಾರ ಆರಂಭ ಶುರುವಾಗುವಲ್ಲಿಂದ ಸಂಜೆ ತನಕ ಗ್ರಾಹಕರು ಕಿಕ್ಕಿರಿದು ತುಂಬಿರುತ್ತಾರೆ. ಇದರಿಂದ ಸಾಮಾನ್ಯ ಸೇವೆಗೂ ಗಂಟಗಟ್ಟಲೇ ಕಾಯಬೇಕಿದೆ. ಖಾತೆ ತೆರೆಯುವುದು ಇತರೆ ವಿಚಾರಗಳಿಗೆ ದಿನಗಟ್ಟಲೇ ಕಾಯುವಂತಾಗಿದೆ. ಈ ರೀತಿ ಇದ್ದರೂ ಹಿರಿಯ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿಲ್ಲ ಎಂದು ಗ್ರಾಹಕರು ದೂರುತ್ತಾರೆ.ಇರುವ ವ್ಯವಸ್ಥೆಯಲ್ಲಿ ಉತ್ತಮ ಸೇವೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡದೇ ಬ್ಯಾಂಕ್‌ನ ವ್ಯವಸ್ಥಾಪಕರು ರಜೆಯಲ್ಲಿದ್ದು, ಗ್ರಾಹಕರ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ವ್ಯವಸ್ಥಾಪಕರು ವಾರಗಟ್ಟಲೆ ರಜೆಯಲಿದ್ದರೆ  ಇಲ್ಲಿನ ಗ್ರಾಹಕರ ಸಮಸ್ಯೆಗೆ ಉತ್ತರಿಸುವರು ಯಾರು ಎಂದು ಗ್ರಾಹಕ ಅಭಿಲಾಷ್ ದೂರಿದ್ದಾರೆ.ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯ್ಕ್, ಗ್ರಾಹಕರಾದ ಸ್ವಾಮಿ ನಾಯ್ಕ್, ಸರೋಜಾ ಬಾಯಿ, ಸುಸಲಿಬಾಯಿ, ಗಿರಿಜಾ, ಪಾರಿ ಬಾಯಿ ಸೇರಿದಂತೆ ಇತರರು ಇದ್ದರು.