ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ. ಏ. 17: ಬೀದರ ಜಿಲ್ಲೆಯಲ್ಲಿ ಏಪ್ರಿಲ್ 18 ಮತ್ತು 19 ರಂದು ನಡೆಯಲಿರುವ ಯುಜಿ ಸಿಇಟಿ-2024 ಪರೀಕ್ಷೆಗಳನ್ನು ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಸುಸೂತ್ರವಾಗಿ ನಡೆಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಯುಜಿ ಸಿಇಟಿ-2024 ರ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಸುವ ಕುರಿತು ಅಧಿಕಾರಿಗಳಿಗೆ ಕರೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
2024ನೇ ಸಾಲಿನ ಇಂಜಿನಿಯರಿಂಗ್, ಕೃಷಿ, ವಿಜ್ಞಾನ, ವೆಟರನರಿ, ಫಾರ್ಮಸಿ, ಬಿ.ಎಸ್.ಸಿ (ನರಸಿಂಗ್) ಮುಂತಾದ ವೃತ್ತಿಪರ ಕೊರ್ಸಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಬೇಕು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕಾಸ್ಟಿಂಗ್ ಇರುವುದರಿಂದ ಯಾರು ಏನು ಮಾಡುತ್ತಾರೆ ಎಂಬ ಎಲ್ಲಾ ಮಾಹಿತಿ ಆಡಿಯೋ, ವಿಡಿಯೋ ಸಹಿತ ದಾಖಲಾಗುವುದರಿಂದ ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಉಪನ್ಯಾಸಕರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳು ಸರಿಯಾದ ಸಮಯದಲ್ಲಿ ತಲುಪಿಸಬೇಕು. ರೂಟ್ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಹಾಜರಿರಬೇಕು ಮತ್ತು ಅಬ್ಸರವರ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಪರೀಕ್ಷೆ ನಡೆಯುವ ದಿನ ಪರೀಕ್ಷಾ ಕೇಂದ್ರಗಳ ಸುತ್ತಲೂ ಕಲಂ 144 ಜಾರಿ ಇರಲಿದ್ದು, ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಏಪ್ರಿಲ್ 18 ರಂದು ಬೆಳಿಗ್ಗೆ 10:30 ರಿಂದ 11:50 ರವರೆಗೆ ಬಯೋಲಜಿ, ಮಧ್ಯಾಹ್ನ 2:30 ರಿಂದ 3:50 ರವರೆಗೆ ಗಣಿತ ವಿಷಯ ಹಾಗೂ ಏಪ್ರಿಲ್ 19 ರಂದು ಬೆಳಿಗ್ಗೆ 10:30 ರಿಂದ 11:50 ರವರೆಗೆ ಫಿಜಿಕ್ಸ್ ಹಾಗೂ ಮಧ್ಯಾಹ್ನ 2:30 ರಿಂದ 3:50 ರವರೆಗೆ ಕೆಮಿಸ್ಟ್ರಿ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಇವು 60 ಅಂಕದ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. ಬೀದರ ಜಿಲ್ಲೆಯಲ್ಲಿ ಒಟ್ಟು 36 ಪರೀಕ್ಷಾ ಕೇಂದ್ರಗಳಿದ್ದು, ಬೀದರ ನಗರದಲ್ಲಿ 23, ಬಸವಕಲ್ಯಾಣದಲ್ಲಿ 6, ಭಾಲ್ಕಿಯಲ್ಲಿ 7 ಕೇಂದ್ರಗಳು ಇರಲಿವೆ. ಒಟ್ಟು ಎಲ್ಲಾ ಕೇಂದ್ರಗಳಲ್ಲಿ 13,436 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಹಾಜರಿರಬೇಕು ಮತ್ತು ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್ ಪೆÇೀನ್, ಬ್ಲೂಟುತ್, ಕ್ಯಾಲ್ಕುಲೇಟರ್, ಕೈ ಗಡಿಯಾರ, ಪೇಪರ್ ಚೀಟಿ, ಪುಸ್ತಕಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ತರಬಾರದು ಮತ್ತು ಜಿನ್ಸ ಪ್ಯಾಂಟ್, ಪುಲ್ ಶರ್ಟ ಹಾಕಿಕೊಂಡು ಬರುವ ಹಾಗಿಲ್ಲ, ತಮ್ಮ ಪ್ರವೇಶ ಪತ್ರದ ಜೊತೆಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಒಂದು ಗುರುತಿನ ಚೀಟಿ ತೆಗೆದುಕೊಂಡು ಬರಬೇಕು ಹಾಗೂ ಪರೀಕ್ಷೆಯಲ್ಲಿ ಕಪ್ಪು ಮತ್ತು ನೀಲಿ ಶಾಯಿಯ ಬಾಲ್ ಪಾಯಿಂಟ್ ಪೆನ್ನುಗಳನ್ನು ಮಾತ್ರ ಉಪಯೋಗಿಸಬೇಕೆಂದು ಹೇಳಿದರು.
ಈ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಚಂದ್ರಕಾಂತ ಶಾಬಾದಕರ್, ಜಿಲ್ಲಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೆಶಕರಾದ ಸುರೇಖಾ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ಬಡಿಗೇರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಜಿಲ್ಲೆಯ ಎಲ್ಲಾ ತಾಲೂಕಿನ ತಹಶಿಲ್ದಾರರು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಬ್ಸರವರ, ಸೆಂಟರ್ ಚಿಫ್, ಕಸ್ಟೋಡಿಯನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.