ಕೋಲಿ, ಕಬ್ಬಲಿಗ ಎಸ್‌ಟಿ ಸೇರ್ಪಡೆ ಪ್ರಸ್ತಾವ ಮತ್ತೊಮ್ಮೆ ಸಲ್ಲಿಕೆ
sಸಂಜೆವಾಣಿ ಪ್ರತಿನಿಧಿಯಿಂದ
ಕಲಬುರಗಿ,ಏ.೧೭-
ಕೋಲಿ ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ವಾಪಸ್ ಕಳಿಸಿದ್ದು ಲೋಕಸಭೆ ಚುನಾವಣೆಯ ಬಳಿಕ ಮತ್ತೊಮ್ಮೆ ಪ್ರಸ್ತಾವನೆ ಖುದ್ದಾಗಿ ಸಲ್ಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಪ್ರಸ್ತಾವನೆಯನ್ನು ವಾಪಸ್ ಕಳಿಸಿರುವ ವಾಸ್ತವಾಂಶವನ್ನು ಮರೆಮಾಚಿ ಸಂಸದ ಉಮೇಶ್ ಜಾಧವ ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಕೋಲಿ ಕಬ್ಬಲಿಗ ಕುರುಬ ಸಮಾಜವನ್ನು ಎಸ್ ಟಿ ಸೇರಿಸುವುದಾಗಿ ಹೇಳಿದ್ದ ಚುನಾವಣೆ ಉಸ್ತುವಾರಿ ಎಂ ಎಲ್ ಸಿ ರವಿಕುಮಾರ ಹಾಗೂ ಜಾಧವ ಮತ ಪಡೆದಿದ್ದರು. ಆದರೆ ಈಗ ಎಲ್ಲರೂ ಮೌನವಾಗಿದ್ದಾರೆ. ’ ಉಮೇಶ್ ಜಾಧವ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕೈಲಾಗದ ಮನುಷ್ಯ. ಈಗ ವಾಸ್ತವಾಂಶವನ್ನು ಜನರ ಮುಂದಿಟ್ಟು ಅವರ ಕೈ ಕಾಲು ಹಿಡಿದು ಕ್ಷಮೆ ಕೇಳಲಿ ’ ಎಂದು ಆಗ್ರಹಿಸಿದರು.
ಮೋದಿ ವಿಶ್ವಗುರು ಅವರಿಗೆ ಉಕ್ರೇನ್ ರಷ್ಯಾ ಯುದ್ದ ನಿಲ್ಲಿಸುವ ಶಕ್ತಿ ಇದೆ. ಚೀನಾ, ಪಾಕಿಸ್ತಾನದವರು ಮೋದಿಯನ್ನು ಕಂಡರೆ ನಡುಗುತ್ತಾರೆ ಎಂದೆಲ್ಲ ಹೇಳಿಕೊಳ್ಳುವ ಬಿಜೆಪಿಗರಿಗೆ ಅವರಿಂದ ಈ ಕೆಲಸ ಮಾಡಿಸಲು ಯಾಕೆ ಆಗಲಿಲ್ಲ ರಾಜ್ಯ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದರೆ ಎಲ್ಲ ಕೆಲಸ ಆಗುತ್ತವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ಜಾಧವ ಅವರಿಗೆ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಯಾಕೆ ಆಗಲಿಲ್ಲ. ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ ಜಿಲ್ಲಾ ಮಟ್ಟದಲ್ಲಿ ಸುಳ್ಳು ಹೇಳುತ್ತಾರೆ ಎಂದು ವಾಗ್ದಾಳಿ ಮಾಡಿದರು.
ಕೋಲಿ ಕಬ್ಬಲಿಗ ಪ್ರಸ್ತಾವನೆ ಚರ್ಚೆಗೆ ಬಂದಾಗ ಮಲ್ಲಿಕಾರ್ಜು ಖರ್ಗೆ ಅವರು ಸಂಸತ್ತಿನಲ್ಲಿ ಇರಲಿಲ್ಲ ಎನ್ನುವ ಜಾಧವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಜಾಧವ ಅವರಿಗೆ ಸಂಸದೀಯ ವ್ಯವಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಂತಿಲ್ಲ. ರಾಜ್ಯ ಸರ್ಕಾರವೇ ಪ್ರಸ್ತಾವನೆ ಕಳಿಸಿದ ಮೇಲೆ ಒಪ್ಪಿಗೆ ಇದೆ ಅಂತ ಅರ್ಥ. ಬಿಜೆಪಿ ಸರ್ಕಾರ ೨೪೬ ಸಂಸದರನ್ನು ಸಸ್ಪೆಂಡ್ ಮಾಡಿ ೫೭% ಬಿಲ್ ಗಳನ್ನು ಎರಡೇ ವಾರದಲ್ಲಿ ಯಾವುದೇ ಚರ್ಚೆ ನಡೆಸದೇ ಪಾಸ್ ಮಾಡಿದ್ದಾರೆ. ತ್ರಿವಳಿ ತಲಾಖ್, ಮಹಿಳಾ ಮೀಸಲಾತಿ ಬಿಲ್, ಜಮ್ಮು ಕಾಶ್ಮೀರ ರೀ ಅರ್ಗನೈಸೇಷನ್ ಬಿಲ್‌ಗಳು ಹಾಗೆ ಪಾಸ್ ಆಗಿವೆ. ಅದರಂತೆ ಕೋಲಿ ಕಬ್ಬಲಿಗ ಹಾಗೂ ಕುರುಬ ಸಮುದಾಯಗಳನ್ನು ಎಸ್ ಟಿ ಪಟ್ಟಿಗೆ ಸೇರಿಸಬೇಕಿತ್ತು ಎಂದರು.
ಶಿವಕುಮಾರ ಹೊನಗುಂಟಿ, ಈರಣ್ಣ ಝಳಕಿ, ಲಚ್ಚಪ್ಪ ಜಮಾದಾರ, ಕಿರಣ್ ದೇಶಮುಖ, ಪ್ರವೀಣ್ ಹರವಾಳ ಇದ್ದರು.