ಯೋಗ ತಾಣದಲ್ಲಿ ರಾಮಧ್ಯಾನ !ವಿಜಯನಗರದಲ್ಲಿ  ಶ್ರೀ ರಾಮನವಮಿ ಆಚರಣೆ
ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.17: ಜನರಿಗೆ ಉತ್ತಮ ಆಡಳಿತ, ಆರೋಗ್ಯ, ಆಹಾರ, ರಕ್ಷಣೆ ನೀಡುವುದೇ ರಾಮರಾಜ್ಯದ ಕಲ್ಪನೆಗಳಲ್ಲಿ ಪ್ರಮುಖವಾದವು. ಆರೋಗ್ಯ ಭಾಗ್ಯಕ್ಕೆ ಯೋಗ ನೀಡಿದ ಕೊಡುಗೆ ಇದೇ ರಾಮರಾಜ್ಯದ ಕಲ್ಪನೆಗಳಿಗೆ ಪೂರಕವಾದು ಎಂದು ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಡಾ. ಎಫ್.ಟಿ ಹಳ್ಳಿಕೇರಿ ಹೇಳಿದರು.
ಹೊಸಪೇಟೆಯ ಸ್ವಾತಂತ್ರ್ಯ ಉದ್ಯಾನವನ ಸೇರಿದಂತೆ ವಿಜಯನಗರದಲ್ಲಿ ಶ್ರೀರಾಮ ನವಮಿ ಆಚರಣೆ ಸಂಭ್ರಮ ಮನೆಮಾಡಿದ್ದು ಪ್ರತಿದಿನ 50ಕ್ಕೂ ಅಧಿಕ ಮಂದಿ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ರಾಮಧ್ಯಾನದ ಮೂಲಕ ಶ್ರೀರಾಮ ನವಮಿ ಆಚರಿಸಲಾಯಿತು.
ಪತಂಜಲಿ ಯೋಗ ಸಮಿತಿಯಿಂದ ನಗರದ 28ಕ್ಕೂ ಅಧಿಕ ಕಡೆಗಳಲ್ಲಿ ಉಚಿತ ಯೋಗ ತರಬೇತಿ ನಡೆಯುತ್ತಿದ್ದು, ಈ ಎಲ್ಲ ಕೇಂದ್ರಗಳ ಸಂಚಾಲಕರು, ಸಾಧಕರ ಉಪಸ್ಥಿತಿಯೊಂದಿಗೆ ಈ ರಾಮಧ್ಯಾನ ನಡೆಯಿತು.
ಯೋಗ ಗುರು ಹಾಗೂ ಪತಂಜಲಿ ಯೋಗ ಸಮಿತಿಯ ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್‌ ಕರ್ವಾ ಅವರು ಆರಂಭದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮದ ಮಾರ್ಗದರ್ಶನ ನೀಡಿದ ಬಳಿಕ ರಾಮನವಮಿಯ ಆಚರಣೆ ಆರಂಭವಾಯಿತು. ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್‌.ಟಿ.ಹಳ್ಳಿಕೇರಿ ಅವರು ರಾಮರಾಜ್ಯದ ಪರಿಕಲ್ಪನೆ ಮೂಡಿದ ಬಗೆ ಹಾಗೂ ಪ್ರಭು ಶ್ರೀರಾಮಚಂದ್ರನ ಜೀವನ ಆದರ್ಶನಗಳ ಬಗ್ಗೆ ಮಾಹಿತಿ ನೀಡಿದರು.
‘ಪ್ರಜೆಗಳ ಯೋಗಕ್ಷೇಮವೇ ಶ್ರೀರಾಮನ ಮುಖ್ಯ ಧ್ಯೇಯವಾಗಿತ್ತು. ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು, ಯಾರಿಗೂ ಅನ್ಯಾಯ ಆಗಬಾರದು, ಜನಸಾಮಾನ್ಯನ ಅಭಿಪ್ರಾಯಕ್ಕೂ ಮನ್ನಣೆ ಸಿಗಬೇಕು ಮುಂತಾದ ಹಲವಾರು ಆದರ್ಶಗಳು ಶ್ರೀರಾಮನ ಆಡಳಿತದ ಭಾಗವಾಗಿತ್ತು. ಹೀಗಾಗಿಯೇ ರಾಮರಾಜ್ಯ ಪರಿಕಲ್ಪನೆ ಎಂಬುದು ಇಡೀ ಜಗತ್ತು ಮೆಚ್ಚುವಂತಹ ಆದರ್ಶ ಆಡಳಿತವಾಗಿದೆ. ಇಂತಹ ಆದರ್ಶಪುರುಷನ ಜನ್ಮದಿನವನ್ನು ಆಚರಿಸುವ ಮೂಲಕ ನಾವು ಆವನ ಗುಣಗಳಲ್ಲಿ ಕೆಲವನ್ನಾದರೂ ನಮ್ಮಲ್ಲಿ ಅಳವಡಿಸಲು ಪ್ರಯತ್ನಿಸಬೇಕು’ ಎಂದು ಅವರು ಹೇಳಿದರು.
ಬಳಿಕ ಸುಮಾರು ಅರ್ಧ ಗಂಟೆ ರಾಮ ಭಜನೆಗಳು ನಡೆದವು. ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತರ ವೇಷ ತೊಟ್ಟ ಮಕ್ಕಳು ಗಮನ ಸೆಳೆದರು. ಗುರುರಾಜ ಭಟ್‌ ಅವರು ಪೂಜೆ ನೆರವೇರಿಸಿದರು.  ಕೋಸಂಬರಿ, ಪಾನಕ, ಅವಲಕ್ಕಿ, ಬಾಳೆಹಣ್ಣು ಪ್ರಸಾದವನ್ನು ವಿತರಿಸಲಾಯಿತು.
ಯೋಗ ಸಾಧಕರಾದ ಪ್ರಕಾಶ ಕುಲಕರ್ಣಿ, ಶಿವಮೂರ್ತಿ, ಶ್ರೀನಿವಾಸ ಮಂಚಿಕಟ್ಟಿ, ಶ್ರೀಧರ, ಸತೀಶ ಪಾವನಜೆ, ಡಾ.ರಾಜಶೇಖರ, ಕಟ್ಟಾ ನಂಜಪ್ಪ,  ಮಂಗಳಮ್ಮ, ಗೌರಮ್ಮ, ಪ್ರಮೀಳಮ್ಮ, ಪೂಜಾ ಐಲಿ, ಚಂದ್ರಿಕಾ, ಶೈಲಜಾ ಕಳಕಪ್ಪ, ಶ್ರೀರಾಮ, ಅನಂತ ಜೋಶಿ ಸೇರಿದಂತೆ ವಿವಿಧ ಕೇಂದ್ರಗಳ ಸಂಚಾಲಕರು, ಯೋಗಸಾಧಕರು ಪಾಲ್ಗೊಂಡಿದ್ದರು.
One attachment • Scanned by Gmail