ಬಿಜೆಪಿಗೆ 400 ಸ್ಥಾನ ಗ್ಯಾರೆಂಟಿದುರ್ಬಲ ದೇಶವನ್ನು ಬಲಿಷ್ಠ ದೇಶ ಮಾಡಿದವರು ಮೋದಿ:ಸತೀಶ್
(ಸಂಜೆವಾಣಿ ವಾರ್ತೆ)
ಬಳ್ಳಾರಿ:  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಗ್ಯಾರೆಂಟಿ. ಕಾಂಗ್ರೆಸ್ ನವರು ಮಹಿಳೆಯರಿಗೆ ಒಂದು ಲಕ್ಷ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಬಹುಮತಕ್ಕೆ ಬೇಕಾದಷ್ಡು ಸ್ಥಾನದಲ್ಲಿ ಸ್ಪರ್ಧೆ ಮಾಡಿಲ್ಲ. ಅವರು ರಾಜ್ಯದ ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದ್ದಾರೆ.
ಅವರು ನಿನ್ನೆ ತಾಲೂಕಿನ ಸಿರಿವಾರ, ಸಂಗನಕಲ್ಲು ಮೊದಲಾದ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಪ್ರಚಾರ ನಡೆಸಿ ಮಾತನಾಡುತ್ತಿದ್ದರು.  ಮೋದಿಯವರು ಭಾರತವನ್ನು ಹತ್ತು ವರ್ಷದಲ್ಲಿ ದುರ್ಬಲ ದೇಶವನ್ನು ಬಲಿಷ್ಠ ದೇಶವನ್ನಾಗಿ ಮಾಡಿದ್ದಾರೆ. ಅವರ ಬಗ್ಗೆ ದೇಶಾದ್ಯಂತ ಅಲೆ ಇದೆ. ಅವರು ಅಪ್ಪಟ ದೇಶ ಭಕ್ತ. ಅವರ ತಾಯಿ ತೀರಿದರೂ ಅಂತ್ಯ ಸಂಸ್ಕಾರ ಮಾಡಿ ದೇಶದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮನಮೋಹನ ಸಿಂಗ್ ಅವರ ಕಾಲದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಿತ್ತು. ಮೋದಿಯವರು ಬಂದ ಮೇಲೆ ಅವರ ತಾಣಗಳಿಗೆ ಹೊಕ್ಕು ಹೊಡೆದು ಬಂದರು. ಭಯೋತ್ಪಾಕದರಿಗೂ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಿದರು.
ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡುವ ನಾಯಕ. ದೇಶದ ನೂರು ಕೋಟಿ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲರ ಮನೆಗಳಿಗೂ ನೀರು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಜಲ ಜಿವನ್ ಮಿಷನ್ ಅಡಿ ಮನೆಗಳಿಗೆ ನಳದ ನೀರು ಒದಗಿಸಲಾಗಿದೆ.
ಲಾಲ್ ಬಹಾದ್ದೂರು ಶಾಸ್ತ್ರಿ ನಂತರ ಅಪ್ಪಟ ದೇಶ ಪ್ರೇಮಿ ನರೇಂದ್ರ ಮೋದಿವರು. ಅವರು ಕೊವಿಡ್ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಕೊಡಿಸಿ ಜೀವ ಉಳಿಸಿದ್ದಾರೆ. ಎಲ್ಲರಿಗೂ ಐದು ಕೆಜಿ‌ ಉಚಿತ ಅಕ್ಕಿ ನೀಡುತ್ತಿದ್ದಾರೆ. ಮನೆಗಳಿಗೆ ನಳದ ಮೂಲಕ ನೀರು ಕೊಡುತ್ತಿದ್ದಾರೆ. ನಾವು ಅವರ ಋಣ ತೀರಿಸಬೇಕಾಗಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಮೋದಿಯವರ ಋಣ ತೀರಿಸೋಣ ಎಂದು ಹೇಳಿದರು.
ಬಳ್ಳಾರಿ ಗ್ರಾಮೀಣ ಮಂಡಲ ಅಧ್ಯಕ್ಷ ಹೆಚ್.ಆರ್ ಮಲ್ಲಿಕಾರ್ಜುನಗೌಡ ಹಲಕುಂದಿ, ಶಿವರುದ್ರಪ್ಪ ಸಿರಿವಾರ, ವೀರಭದ್ರಪ್ಪ ಮೊದಲಾದವರು ಇದ್ದರು