ಗ್ಯಾರೆಂಟಿಯೇ ಇಲ್ಲದ ಕಾಂಗ್ರೆಸ್  ಗ್ಯಾರೆಂಟಿಗಳು : ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಎ,17- ಅಧಿಕಾರಕ್ಕಾಗಿ ರಾಜ್ಯದ ಜನತೆಗೆ ಕಾಂಗ್ರೆಸ್ ನೀಡುತ್ತಿರುವ ಗ್ಯಾರೆಂಟಿ ಯೋಜನೆಗಳು ಈ ಲೋಕಸಭಾ ಚುನಾವಣೆ ಬಳಿಕ ಇರುತ್ತವೆಯಾ ಎಂಬ ಗ್ಯಾರೆಂಟಿ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಇಂದು ನಗರದ ಮತದಾರರಿಗೆ ಹೇಳಿದರು.
ನಗರದ ತಾಳೂರು ರಸ್ತೆ, ಶ್ರಿನಗರ, ಗೋವಿಂದ ಕಲ್ಯಾಣ ಮಂಟಪ, ಅಸಕುಲ ಚಲುಮಯ್ಯ ಬೀದಿ  ಮೊದಲಾದಡೆ ಸಂಚರಿಸಿ ಮತಯಾಚನೆ ಮಾಡಿ ಮಾತನಾಡುತ್ತಿದ್ದರು.
ಗ್ಯಾರೆಂಟಿ ಯೋಜನೆಗಳಿಗಾಗಿ ಈಗಾಗಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಒಂದು ವರೆ ಲಕ್ಷ ಕೋಟಿ ರೂ ಸಾಲ ಮಾಡಿ ಆರ್ಥಿಕವಾಗಿ ದಿವಾಳಿಯಾಗಿದೆ. ವಿದ್ಯುತ್, ಮದ್ಯ ಧರ ಹೆಚ್ಚಿಸಿದೆ.  ಈ ಚುನಾವಣೆ ಬಳಿಕ ಈ ಗ್ಯಾರೆಂಟಿಗಳು ಇರೋದಿಲ್ಲ ಎಂಬುದು ಗ್ಯಾರೆಂಟಿಯಾಗಿದೆ.
ಅದಕ್ಕಾಗಿ ಜನತೆ ಇವನ್ನು ನಂಬಿ ನೀವು ಬದುಕುವುದು ಬೇಡ‌. ಕೇಂದ್ರದ ಬಿಜೆಪಿ  ಸರ್ಕಾರ ಜಾರಿಗೆ ತಂದಿರುವ ಮುದ್ರಾ, ಸ್ವಯಂ ನಿಧಿ, ವಿಶ್ವಕರ್ಮ ಯೋಜನೆ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ದುಡಿದು, ವ್ಯಾಪಾರ ಮಾಡಿ ಬದುಕೋದು ಉತ್ತಮ. ಅದಕ್ಕಾಗಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ ತಮಗೆ ಆಶಿರ್ವದಿಸುವಂತೆ ಕೋರಿದರು.
ಈ ವೇಳೆ ನಗರ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ನಿಮಗೆ ಕುಕ್ಕರ್ ಕೊಟ್ಟು ಗೆದ್ದವರು, ಈಗ ನೀರು ಕೊಡಲು ಆಗದೆ ವಾರಕ್ಕೆ, ಹತ್ತು ಹದಿನೈದು ದಿನಗಳಿಗೆ ಒಮ್ಮೆ ನೀರು ಕೊಡುತ್ತಿದ್ದಾರೆ. ನಮ್ಮ ಆಡಳಿತ ಅವಧಿಯಲ್ಲಿ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.
ಪಕ್ಷದ ಮುಖಂಡರಾದ ಲಕ್ಷ್ಮೀ ಅರುಣ, ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಹನುಂಮತ ಗುಡಿಗಂಟೆ ಮೊದಲಾದವರು ಇದ್ದರು.