ಒಂದು ದೇಶ, ಒಂದು ಚುನಾವಣೆ ವಿರೋಧಿಸಿ ರಾಜ್ಯವ್ಯಾಪಿ ಸೆ. 26ರಂದು ಜಿಲ್ಲಾ ಕೇಂದ್ರಗಳಲ್ಲಿ ಧರಣಿ
ಕಲಬುರಗಿ:ಸೆ.20:ಒಂದು ದೇಶ ಒಂದು ಚುನಾವಣೆಯನ್ನು ವಿರೋಧಿಸಿ ರಾಜ್ಯವ್ಯಾಪಿ ಸೆಪ್ಟೆಂಬರ್ 26ರಂದು ರಾಜ್ಯವ್ಯಾಪಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ವಿಷಯ ಚರ್ಚಿಸದೇ ಏಕಾಏಕಿ ಜಾರಿ ಮಾಡಲು ಹೊರಟಿರುವ ಕೇಂದ್ರದ ಬಿಜೆಪಿ ಸರ್ಕಾರದ ನಡೆ ಖಂಡನಾರ್ಹ. ಇದನ್ನು ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಹಮ್ಮಿಕೊಂಡಿದ್ದು, ಪ್ರಗತಿಪರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಮೀಸಲಾತಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ, ಜೆಡಿಎಸ್ ನಡೆಯನ್ನು ಖಂಡಿಸಿ ಒಂದು ದೇಶ ಒಂದು ಚುನಾವಣೆಯನ್ನು ಕೇಂದ್ರ ಸರ್ಕಾರದ ಅಜೆಂಡಾದ ಭಾಗ. ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ದೇಶ, ಒಂದು ಚುನಾವಣೆ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರೋಧವಾಗಿದೆ. ಅದನ್ನು ಅನುಷ್ಠಾನ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಇಂತಹುದೊಂದು ಮಹತ್ವದ ಪ್ರಸ್ತಾವದ ಕುರಿತು ವಿರೋಧ ಪಕ್ಷಗಳೊಂದಿಗೂ ಚರ್ಚೆಯನ್ನು ಸಹ ಮಾಡದೇ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಏಕಕಾಲಕ್ಕೆ ಕೇಂದ್ರ ಮತ್ತು ವಿಧಾನಸಭೆಗಳಿಗೆ ಚುನಾವಣೆ ಮಾಡಲು ಹೊರಟಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದುಷ್ಟ ಉದ್ದೇಶವನ್ನು ತೋರಿಸುತ್ತದೆ. ಒಂದು ಸರ್ಕಾರದ ಆದ್ಯತೆಗಳು ಏನಾಗಿರಬೇಕು ಎನ್ನುವ ಸಾಮಾನ್ಯ ಜ್ಞಾನವು ಕೇಂದ್ರ ಸರ್ಕಾರಕ್ಕಾಗಲಿ, ಪ್ರಧಾನಿಯವರಿಗೆ ಇದ್ದಂತೆ ಕಾಣಿಸುತ್ತಿಲ್ಲ. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಹಣದುಬ್ಬರದಿಂದ ದೇಶದ ಆರ್ಥಿಕತೆ ತತ್ತರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ದೇಶಾದ್ಯಂತ ಕಾನೂನು ಸುವ್ಯವಸ್ಥೆಯ ಮೇಲಿನ ನಿಯಂತ್ರಣ ತಪ್ಪಿ ಹೋಗಿದ್ದು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ಮಿತಿ ಮೀರಿ ಹೋಗುತ್ತಿವೆ. ಆ ಕುರಿತು ಯೋಚನೆ ಮಾಡಲು ಕೂಡ ಸಮಯವಿಲ್ಲದ ಪ್ರಧಾನಿ ಗಿಮಿಕ್ ಮೂಲಕ ಗಮನವನ್ನು ಬೇರೆಡೆ ಸೆಳೆದು ತಮ್ಮ ವಐಫಲ್ಯ ಮುಚ್ಚಿ ಹಾಕಲು ಮುಂದಾಗಿದ್ದಾರೆ ಎಂದು ಅವರು ದೂರಿದರು.
ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ. ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸ ಮತ ಗಳಿಸಲು ಸೋತರೆ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾಪದಲ್ಲಿ ಪರಿಹಾರವಿಲ್ಲ, ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರವಾಗಿದೆ ಎಂದು ಅವರು ಹೇಳಿದರು.
ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಅವರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿ, ಜೆಡಿಎಸ್ ನಾಯಕರು ಮಾಡುತ್ತಿರುವ ಪ್ರತಿಭಟನೆ ಖಂಡನಾರ್ಹ. ಸದಾ ಮೀಸಲಾತಿಯನ್ನು ವಿರೋಧಿಸುತ್ತ ಬಂದಿರುವ ಬಿಜೆಪಿಯವರು ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಮೀಸಲಾತಿ ವಿರೋಧವನ್ನು ರಕ್ತಗತವಾಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ರಾಹುಲ್‍ಗಾಂಧಿ ಅವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳುವ ಜ್ಞಾನವಾಗಲಿ, ವ್ಯವಧಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ. ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಉದ್ದೇಶ. ಆ ಉದ್ದೇಶ ಸಾಧನೆಯಾಗಬೇಕು. ಅದನ್ನು ರಾಹುಲ್‍ಗಾಂಧಿ ಅವರು ಹೇಳಿದ್ದಾರೆ. ಅದು ಹೇಗೆ ಮೀಸಲಾತಿ ವಿರೋಧಿ ಹೇಳಿಕೆಯಾಗುತ್ತದೆ ಎಂದು ಪ್ರಶ್ನಿಸಿದ ಅವರು, ಸರ್ವರಿಗೂ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸಮಾನ ಪಾಲು ಸಿಗಬೇಕೆಂಬ ಉದ್ದೇಶದಿಂದಲೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಆದಾಗ್ಯೂ, ಮೀಸಲಾತಿಯ ಹೊರತಾಗಿಯೂ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯತರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ. ಸಾಮಾಜಿಕ ಅಸಮಾನತೆ ಕಡಿಮೆಯಾಗಿಲ್ಲ. ಅದಕ್ಕೆ ಬಿಜೆಪಿ ನಾಯಕರಂತಹ ಜಾತಿ ಪಟ್ಟಭದ್ರರು ಕಾರಣ ಎಂಬುದು ಸೂರ್ಯನಷ್ಟೇ ಸತ್ಯ ಎಂದು ದೂಷಿಸಿದರು.
ಬಿಜೆಪಿಯ ಮಾತೃ ಸಂಸ್ಥೆಯಾದ ಆರ್‍ಎಸ್‍ಎಸ್ ಹುಟ್ಟಿನಿಂದಲೇ ವರ್ಣ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಸಾಮಾಜಿಕ ನ್ಯಾಯದಾನದ ಅವಕಾಶಗಳು ತೆಗೆದುಕೊಂಡಾಗೆಲ್ಲ ಅದರ ವಿರುದ್ಧ ಹೋರಾಟ ಮಾಡುವುದು ಬಿಜೆಪಿ, ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ವಿರೋಧಿಸಿ ದಿ. ನ್ಯಾ. ರಾಮಾಜೋಯಿಸ್ ಅವರಿಂದ ಸುಪ್ರಿಂಕೋರ್ಟ್ ಕಟ್ಲೆ ಹಾಕಿಸಿದ್ದ ಬಿಜೆಪಿ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಮೀಸಲತಿಯನ್ನು ವಿರೋಧಿಸಿ ಚಳುವಳಿ ಮಾಡಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಬಿಜೆಪಿ ಮಂಡಲ್ ವರದಿಗೆ ವಿರುದ್ಧವಾಗಿ ಕಮಂಡಲ ಚಳುವಳಿಗೆ ಚಾಲನೆ ನೀಡಿ ತಲೆಯಲ್ಲಿ ಧರ್ಮದ ಅಫೀಮು ತುಂಬುವ ಪ್ರಯತ್ನ ಮಾಡಿತು. ಕೋಮುವಾದದ ಗುರಿ ಕೇವಲ ಅಲ್ಪಸಂಖ್ಯಾತರಲ್ಲ, ದಲಿತ ಮತ್ತು ಅಲ್ಪಸಂರ್ಖಯಾತ ಸಮುದಾಯದ ನಾಶವು ಅದರ ಗುರಿಯಾಗಿದೆ. ಮೀಸಲಾತಿಯು ಸೇರಿದಂತೆ ಸಾಮಾಜಿಕ ನ್ಯಾಯದಾನದ ಅವಕಾಶಗಳನ್ನು ಕಾಲಕಾಲಕ್ಕೆ ಹೇಗೆ ಬಿಜೆಪಿ ಮತ್ತು ಸಂಘ ಪರಿವಾರ ಚಿವುಟಿ ಹಾಕಿದೆ ಎನ್ನುವುದನ್ನು ನಮ್ಮ ಜನ ನೋಡಿ ಅನುಭವಿಸಿ ತಿಳಿದುಕೊಂಡಿದ್ದಾರೆ. ಅವರ ಹುಸಿ ಸಾಮಾಜಿಕ ನ್ಯಾಯದ ಘೋಷಣೆಗೆ ಅವರು ಮರಳಾಗುವುದಿಲ್ಲ ಎಂದು ಅವರು ಹೇಳಿದರು.
ಸಮಾನ ಅವಕಾಶ ಸಿಕ್ಕಿದೆಯೋ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲಿಕ್ಕಾಗಿಯೇ ಸುಪ್ರಿಂಕೋರ್ಟ್ ಜಾತಿ ಆಧಾರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕೆಂದು ಹೇಳಿದೆ. ಅದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ. ಬಿಜೆಪಿ ನಾಯಕರಿಗೆ ಮತ್ತು ಕೇಂದ್ರದಲ್ಲಿರುವ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಕುರಿತು ಅಷ್ಟೊಂದು ಕಾಳಜಿ ಇದ್ದರೆ ಮೊದಲು ಜಾತಿ ಗಣತಿಯನ್ನು ಶೀಘ್ರವಾಗಿ ದೇಶಾದ್ಯಂತ ನಡೆಸಿ ತೋರಿಸಬೇಕು. ಮೀಸಲಾತಿ ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ತಲುಪಿದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಇದು ಅವಶ್ಯಕವಾಗಿದೆ ಎಂದು ಅವರು ತಿಳಿಸಿದರು.
ಮೀಸಲಾತಿ ಪ್ರಮಾಣವನ್ನು ಈಗಿನ ಶೇಕಡಾ 50ರಿಂದ ಶೇಕಡಾ 75ಕ್ಕೆ ಹೆಚ್ಚಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಅವರು ಬಹಿರಂಗ ಸಭೆಯಲ್ಲಿ ಮಾತ್ರವಲ್ಲ, ಲೋಕಸಭೆಯಲ್ಲಿಯೂ ಹೇಳಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರಿಗೆ ಮೀಸಲಾತಿ ಕುರಿತು ಅಷ್ಟೊಂದು ಬದ್ಧತೆ ಇದ್ದರೆ ಮೀಸಲಾತಿಯ ಪ್ರಮಾಣವನ್ನು ಈಗಿನ ಶೇಕಡಾ 50ರಿಂದ 75ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದರು.
ಜಾತಿನಿಂದನೆ ಜೊತೆ ಜೀವ ಬೆದರಿಕೆ ಆರೋಪ ಹೊತ್ತ ಬೆಂಗಳೂರಿನ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ಅವರು, ಒಕ್ಕಲಿಗ ಮತ್ತು ದಲಿತ ಸಮುದಾಯಗಳಿಗೆ ಅವಹೇಳನ ಮಾಡಿರುವ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಸಿ. ವಾಲಿ, ಸುರೇಶ್ ಹಾದಿಮನಿ, ಹೆಚ್. ಶಂಕರ್, ಕೃಷ್ಣಪ್ಪ ಕರಣಿಕ್ ಮುಂತಾದವರು ಉಪಸ್ಥಿತರಿದ್ದರು.