ಸದೃಢ ಆರೋಗ್ಯ, ಸ್ವಸ್ಥ ಸಮಾಜಕ್ಕಾಗಿ ಸ್ವಚ್ಚತೆ ಕಾಪಾಡುವುದು ಅಗತ್ಯ
ಕಲಬುರಗಿ:ಸೆ.20: ಮಾನವನಿಗೆ ಬರುವ ಸಾಮಾನ್ಯ ಖಾಯಿಲೆಗಳಿಗೆ ಅನೈರ್ಮಲತೆ ಪ್ರಮುಖ ಕಾರಣವಾಗಿದೆ. ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಚತೆ ಕಾಪಾಡುವುದರಿಂದ ವ್ಯಕ್ತಿ ಆರೋಗ್ಯವಾಗುವುದರ ಜೊತೆಗೆ ಸ್ವಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಘ(ನಿಮಾ)ದ ಜಿಲ್ಲಾಧ್ಯಕ್ಷ ಡಾ.ಪ್ರಮೋದ ಗುಂಡಗುರ್ತಿ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ “ವಿಶ್ವ ಸ್ವಚ್ಚತೆ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ವಚ್ಚ ಮತ್ತು ಶುದ್ಧವಾದ ಕುಡಿಯುವ ನೀರಿನ ಸೇವೆನೆ, ತಾಜಾ ಮತ್ತು ಸಮತೋಲಿತ ಆಹಾರ ಸೇವಿಸಬೇಕು. ಆಗಾಗ್ಗೆ ಕೈಗಳನ್ನು ಸ್ವಚ್ಚಗೊಳಿಸಬೇಕು. ಎಣ್ಣೆಯಲ್ಲಿ ಕರಿದ, ಹುರಿದ ಹಾಗೂ ಜಂಕ್ ಆಹಾರಗಳ ಸೇವನೆ ಬೇಡ. ಸ್ವಚ್ಚವಾದ ಬಟ್ಟೆಗಳನ್ನು ಧರಿಸಬೇಕು. ನೀರನ್ನು ಕಾಯಿಸಿ, ಆರಿಸಿ ಕುಡಿಯಬೇಕು. ಮನೆಯಲ್ಲಿಯೇ ತಯಾರಿಸಿದ ಆಹಾರಗಳನ್ನು ಸೇವಿಸಬೇಕು. ದೈಹಿಕ ಸ್ವಚ್ಚತೆಯ ಜೊತೆಗೆ ಮನೆ ಹಾಗೂ ಸುತ್ತ-ಮುತ್ತಲಿನ ಪರಿಸರದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬಯಲು ಶೌಚಾಲಯ ಎಂದಿಗೂ ಬೇಡ. ಪ್ಲಾಸಿಕ್‍ಗೆ ಪರ್ಯಾಯ ಬಳಕೆ ಅಗತ್ಯ. ಸ್ವಚ್ಚತೆ ಕೇವಲ ಕೆಲವು ವ್ಯಕ್ತಿ, ಸಂಸ್ಥೆ, ಸರ್ಕಾರದ ಕಾರ್ಯವಾಗದೆ, ಪ್ರತಿಯೊಬ್ಬರು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಿ ಕೆಲಸ ಮಾಡಬೇಕಾಗಿದೆ ಎಂದು ಮಾರ್ಮಿಕವಾಗಿ ಅನೇಕ ಪ್ರಸಂಗಗಳನ್ನು ವಿವರಿಸುತ್ತಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳಿದ್ದರು.