ಅಪಘಾತ: ಪ್ರಜ್ಞೆ ತಪ್ಪಿಬಿದ್ದಾಗ 1.28 ಲಕ್ಷ ಪಿಗ್ಮಿ ಹಣ ಕಳವು
ಕಲಬುರಗಿ,ಸೆ.20-ಅಪಘಾತ ಸಂಭವಿಸಿ ಪ್ರಜ್ಞೆ ತಪ್ಪಿ ಬಿದ್ದ ಪಿಗ್ಮಿ ಏಜೆಂಟ್ ಬಳಿ ಇದ್ದ 1,28,000 ರೂ.ಬ್ಯಾಂಕಿನ ಪಿಗ್ಮಿ ಹಣ ಕಳವು ಮಾಡಿರುವ ಘಟನೆ ಆಳಂದ ಚೆಕ್‍ಪೋಸ್ಟ್ ಸಮೀಪದ ಸ್ವಾರಗೇಟ್ ನಗರದ ಹತ್ತಿರ ನಡೆದಿದೆ.
ಖಾಸಗಿ ಬ್ಯಾಂಕ್ ಒಂದರಲ್ಲಿ ಪಿಗ್ಮಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ಕಮಾಲ ನಗರದ ಉದಯಕುಮಾರ ಜಮಾದಾರ (23) ಎಂಬುವರೆ ಹಣ ಕಳೆದುಕೊಂಡಿದ್ದು, ಅವರು ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸೆ.10 ರಂದು ಎಂದಿನಂತೆ ಬ್ಯಾಂಕಿನ್ ಪಿಗ್ಮಿ ಹಣ ಕಲೆಕ್ಷನ್ ಮಾಡಿಕೊಂಡು ರಾತ್ರಿ 8.30ರ ಸುಮಾರಿಗೆ ಬೈಕ್ ಮೇಲೆ ಆಳಂದ ಚೆಕ್‍ಪೋಸ್ಟ್ ಮಾರ್ಗವಾಗಿ ಬ್ಯಾಂಕಿಗೆ ಹೋಗುತ್ತಿದ್ದಾಗ ಸ್ವಾರಗೇಟ್ ನಗರದ ಹತ್ತಿರ ನಾಯಿ ಅಡ್ಡಬಂದ ಕಾರಣ ಬೈಕ್ ಸ್ಲೀಪ್ ಆಗಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದೆ. ಈ ವೇಳೆ ಅಪರಿಚಿತರು ನಗರದ ಜಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದಾರೆ. ಆದರೆ, ತನ್ನ ಬಳಿ ಇದ್ದ ಬ್ಯಾಂಕಿನ 1.28 ಲಕ್ಷ ರೂ.ಪಿಗ್ಮಿ ಹಣ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ.