ಆಟೋಗೆ ಲಾರಿ ಡಿಕ್ಕಿ: ಗಾಯಗೊಂಡಿದ್ದ ವ್ಯಕ್ತಿ ಸಾವು
ಕಲಬುರಗಿ,ಸೆ.20-ತಾಲ್ಲೂಕಿನ ಹಡಗಿಲ್ ಹಾರುತಿ ಕ್ರಾಸ್ ಹತ್ತಿರ ಆಟೋಗೆ ಲಾರಿ ಡಿಕ್ಕಿ ಹೊಡೆದು ಗಾಯಗೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗಂಗಾನಗರದ ಶಿವಕುಮಾರ ಚಿಣಮಗೇರಿ ಮೃತಪಟ್ಟವರು.
ಇವರು ಸೆ.18 ರಂದು ಸಾಯಂಕಾಲ ಪರಿಚಯದ ಶರಣು ಬಡಿಗೇರ ಎಂಬುವರ ಆಟೋ ರೀಕ್ಷಾದಲ್ಲಿ ಚಿಣಮಗೇರಿಗೆ ಹೊರಟಿದ್ದರು. ಹಡಗಿಲ್ ಹಾರುತಿ ಕ್ರಾಸ್ ಹತ್ತಿರ ಅಫಜಲಪುರ ಕಡೆಯಿಂದ ಕಲಬುರಗಿ ಕಡೆಗೆ ಹೊರಟಿದ್ದ ಲಾರಿ ಆಟೋಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.19 ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.