ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರೆ ಸಂಪನ್ನ
ಧಾರವಾಡ,ಏ17 : ಕಳೆದ 20 ದಿನಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳಿಗೊಂದಿಗೆ ನಡೆದುಕೊಂಡು ಬಂದಿದ್ದ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಮಂಗಳವಾರ ಪ್ರಾತಃಕಾಲದಲ್ಲಿ ಶ್ರೀಮಠದಲ್ಲಿ ನಿರ್ವಿಕಲ್ಪ ಸಮಾಧಿಸ್ಥರಾಗಿರುವ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಗೆ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ದಿನ ಉಭಯ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥದ ಕಳಸವನ್ನು ಅವರೋಹಣ ಮಾಡಲಾಯಿತು.
ಅಮ್ಮಿನಬಾವಿ ಗ್ರಾಮದ ಹಲವಾರು ಭಕ್ತರು ಇದ್ದರು.
ಮಹಾರಾಷ್ಟ್ರ ರಾಜ್ಯವೂ ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹೆಬ್ಬಳ್ಳಿ, ತಲವಾಯಿ, ಹಾರೋಬೆಳವಡಿ, ನಿಗದಿ, ಬೆನಕನಕಟ್ಟಿ, ಕ್ಯಾರಕೊಪ್ಪ, ಪುಡಲಕಕಟ್ಟಿ, ಉಪ್ಪಿನಬೆಟಗೇರಿ, ಶಿರೂರ, ಇನಾಂಹೊಂಗಲ ಮುಂತಾದ ಕಡೆಗಳಿಂದ 20 ದಿನಗಳ ಅವಧಿಯಲ್ಲಿ ಅಧಿಕ ಸಂಖ್ಯೆಯ ಶ್ರೀಮಠದ ಶಿಷ್ಯ ಸದ್ಭಕ್ತರು ಆಗಮಿಸಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಯ ದರ್ಶನಾಶೀರ್ವಾದ ಪಡೆದರು.