ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಿ
ಗೌರಿಬಿದನೂರು.ಏ.೧೭ – ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗ ನಡೆಸುವ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ಸಂತೋಷದಿಂದ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸೋಣ ನ್ಯಾಷನಲ್ ಪದವಿ ಕಾಲೇಜಿನ ಛೇರ್ಮನ್ ಮುದುಗೆರೆ ನಾಗರಾಜಪ್ಪ ತಿಳಿಸಿದರು.
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಅಂಗವಾಗಿ ನ್ಯಾಷನಲ್ ಪದವಿ ಕಾಲೇಜು, ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯ ವತಿಯಿಂದ ಆಯೋಜಿಸಿದ್ದ ’ಮತದಾನ ಜಾಗೃತಿ ಜಾಥಾ’ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಡೀ ಪ್ರಪಂಚದಲ್ಲಿಯೇ ಅತ್ಯಂತ ಪವಿತ್ರವಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅದೃಷ್ಟ ದೊರೆತಿರುವ ನಾವೆಲ್ಲರೂ ಅದರ ಅವಿಭಾಜ್ಯ ಅಂಗವಾಗಿದ್ದೇವೆ. ಇಡೀ ದೇಶದ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರೂ ತಪ್ಪದೆ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಬೇಕಾಗಿದೆ. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭಿತಿ ಮತ್ತು ನೆಮ್ಮದಿಯಿಂದ ಮತ ಚಲಾಯಿಸಿ. ಪ್ರತೀ ಮತಗಟ್ಟೆಯಲ್ಲಿ ಶೇ ೧೦೦ ರಷ್ಟು ಮತದಾನವಾಗುವಂತೆ ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಹಕ್ಕನ್ನು ತಪ್ಪದೆ ಚಲಾಯಿಸಿ ಸಂವಿಧಾನದ ಆಶಯಗಳನ್ನು ಉಳಿಸಿ ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಎಸ್.ಗಾಯತ್ರಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಮತವನ್ನು ಯೋಚಿಸಿ ಅರ್ಹ ವ್ಯಕ್ತಿಗೆ ಚಲಾಯಿಸಬೇಕಾಗಿದೆ. ಯಾರೊಬ್ಬರ ಮತವೂ ಮಾರಾಟವಾಗದೆ ದೇಶದ ಪ್ರಗತಿಗಾಗಿ, ಸಂವಿಧಾನದ ಉಳಿವಿಗಾಗಿ ಚಲಾಯಿಸಬೇಕಾಗಿದೆ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕಾರ್ಯವಾಗಿದೆ. ಇಂತಹ ಪವಿತ್ರವಾದ ಕಾರ್ಯದಲ್ಲಿ ನಾವೆಲ್ಲರೂ ಶ್ರದ್ದೆ ಮತ್ತು ಆಸಕ್ತಿಯಿಂದ ಭಾಗವಹಿಸಿ ದೇಶದ ಘನತೆ ಮತ್ತು ಗೌರವವನ್ನು ಉಳಿಸಬೇಕಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕಾಗಿದೆ ಎಂದು ಹೇಳಿದರು.
ನ್ಯಾಷನಲ್ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾಲೇಜು ಮುಂಭಾಗದಿಂದ ನಗರದ ಮುಖ್ಯ ರಸ್ತೆಯ ಮೂಲಕ ಜಾಥಾದೊಂದಿಗೆ ಸಾಗಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮತದಾನದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಮಹಾತ್ಮ ಗಾಂಧಿ ವೃತ್ತವನ್ನು ತಲುಪಿದರು.
ವೃತ್ತದಲ್ಲಿ ತಾಲ್ಲೂಕು ದಂಡಾಧಿಕಾರಿ ಮಹೇಶ್ ಎಸ್.ಪತ್ರಿ, ನಗರಸಭೆ ಆಯುಕ್ತೆ ಡಿ.ಎಂ.ಗೀತಾ, ಸ್ವೀಪ್ ಸಮಿತಿಯ ಅಧ್ಯಕ್ಷ ಜಿ.ಕೆ.ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಶ್ರೀನಿವಾಸ ಮೂರ್ತಿ ಸೇರಿದಂತೆ ಇತರರು ವಿದ್ಯಾರ್ಥಿಗಳಿಗೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಉಪ ಪ್ರಾಂಶುಪಾಲರಾದ ಪ್ರೊ.ನೇತ್ರ, ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ನ ಸಂಚಾಲಕರಾದ ಡಾ.ರಾಮಾಂಜಿ, ಪ್ರೊ.ರಾಮಾಂಜಿನಮ್ಮ, ಪ್ರೊ.ಜಗದೀಶ್, ಡಾ.ಗುಣರಂಜಿನಿ, ಡಾ. ಶೈಲಜಸಪ್ತಗಿರಿ, ವಿಜಯ್ ಕುಮಾರ್, ಶ್ರೇಯಸ್, ಪ್ರೊ.ನಾಗರಾಜ್, ಷರೀಫಾಬಾನು, ಪ್ರೊ.ಮುಗಳೀಶ್ವರ, ವರ್ಷ ಸೇರಿದಂತೆ ಇತರ ಎಲ್ಲಾ ಭೋದಕ ಸಿಬ್ಬಂದಿ, ಎನ್.ಎಸ್.ಎಸ್, ಎನ್.ಸಿ.ಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.