ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ತೀರ್ಮಾನ
ಮುಳಬಾಗಿಲು,ಏ,೧೭-ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ದಿಗಾಗಿ ಕಳೆದ ೧೦ ವರ್ಷದಿಂದ ಶ್ರಮಿಸುತ್ತಿದ್ದು ೩ ನೇ ಬಾರಿಗೆ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬುರನ್ನು ಬೆಂಬಲಿಸುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಬೇವಹಳ್ಳಿ ಟೊಮೆಟೋ ಗೋಪಾಲ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಳೆದ ೧೦ ವರ್ಷದಿಂದ ರಾಜಕೀಯವಾಗಿ ದೂರ ಉಳಿದಿದ್ದೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಘಟಬಂಧನ್ ನಾಯಕರು ನಡೆದುಕೊಳ್ಳುತ್ತಿರುವ ರೀತಿ ನೀತಿಯನ್ನು ಖಂಡಿಸುತ್ತೇನೆಂದು ತಿಳಿಸಿದರಲ್ಲದೆ ಕೆ.ಹೆಚ್. ಮುನಿಯಪ್ಪ ಉತ್ತಮ ವ್ಯಕ್ತಿಯಾಗಿದ್ದು ಅವರ ಮಾತಿಗೆ ಪಕ್ಷದಲ್ಲಿ ಬೆಲೆ ನೀಡಿಲ್ಲ ಅವರ ಬೆಂಬಲಿಗನಾದ ನಾನು ಮತ್ತು ನನ್ನ ಬೆಂಬಲಿಗರು ಈ ಬಾರಿ ಎನ್‌ಡಿಎ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಲು ತೀರ್ಮಾನಿಸಿರುವುದಾಗಿ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವ ರೀತಿ ಉತ್ತಮ ವ್ಯಕ್ತಿಯೋ ಅದೇ ರೀತಿ ಕೆ.ಹೆಚ್. ಮುನಿಯಪ್ಪ ಸಹ ಉತ್ತಮ ವ್ಯಕ್ತಿಯಾಗಿದ್ದು ಘಟಬಂದನ್ ಅವರಿಗೆ ರಾಜಕೀಯವಾಗಿ ತೊಂದರೆ ನೀಡಿದ್ದಾರೆಂದು ಟೀಕಿಸಿದರಲ್ಲದೆ ಈ ಬಾರಿ ಯುವಕರು ಮತ್ತು ಸಾಮಾನ್ಯ ಜನತೆ ಮೋದಿ ಆಡಳಿತ ಮುಂದುವರೆಯಲು ತೀರ್ಮಾನಿಸಿದ್ದು ಕೋಲಾರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ಅಭ್ಯರ್ಥಿ ಸ್ಥಳೀಯರಲ್ಲ ಹೈಕಮಾಂಡ್ ತೀರ್ಮಾನ ಸರಿಯಲ್ಲ ಆದರೆ ಎನ್‌ಡಿಎ ಅಭ್ಯರ್ಥಿ ಸ್ಥಳೀಯರಾಗಿದ್ದು ಅವರ ಗೆಲುವಿಗೆ ಶಕ್ತಿಮೇರಿ ಶ್ರಮಿಸುತ್ತೇನೆಂದು ಹೇಳಿದರು.