ಹೇಮಾವತಿ ನದಿ ಉಗಮ ಸ್ಥಾನವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.17: ಹೇಮಾವತಿ ನದಿ ಉಗಮ ಸ್ಥಾನವನ್ನು ತಲಕಾವೇರಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹೇಮಾವತಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವಂತೆ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ ಒತ್ತಾಯಿಸಿದೆ.
ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ ಅಧ್ಯಕ್ಷ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿ.ಆರ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಪಟ್ಟಣದಲ್ಲಿಂದು ನಡೆದ ಸಮಿತಿಯ ಸಭೆಯಲ್ಲಿ ಹೇಮಾವತಿ ನದಿ ಅಭಿವೃದ್ದಿ ಪ್ರಾಧಿಕಾರ ರಚಿಸುವಂತೆ ರಾಜ್ಯ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಲು ನಿರ್ಧರಿಸಲಾಯಿತು. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ ಜೀವನದಿ ಕಾವೇರಿಯ ಪ್ರಮುಖ ಉಪನದಿಯಾಗಿರುವ ಹೇಮಾವತಿಯು ಪಶ್ಚಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹುಟ್ಟಿ 250ಕಿ.ಲೋ.ಮೀಟರ್ ಗೂ ಹೆಚ್ಚು ಉದ್ದವಾಗಿ ಹರಿದು ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೊಡಗು, ತುಮಕೂರು ಸೇರಿದಂತೆ 06ಜಿಲ್ಲೆಗಳ ಭೂಮಿಯನ್ನು ಬಂಗಾರದ ಭೂಮಿಯನ್ನಾಗಿಸಿರುವ ಹೇಮಾವತಿ ನದಿ ಹಾಗೂ ನದಿಯ ಉಗಮ ಸ್ಥಾನವನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯ ಮಾಡಲಾಗಿದೆ. ಹೇಮಾವತಿ ನದಿ ಅಭಿವೃದ್ದಿ ಪ್ರಾಧಿಕಾರ ರಚನೆಯಾದರೆ ಹೇಮಾವತಿ ನದಿಯ ಉಗಮ ಸ್ಥಾನವಾದ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯನ್ನು ಕಾವೇರಿ ಉಗಮ ಸ್ಥಾನವಾದ ತಲಕಾವೇರಿ ಮಾದರಿಯಲ್ಲಿ ಒಂದು ಪವಿತ್ರವಾದ ಪುಣ್ಯ ತೀರ್ಥ ಕ್ಷೇತ್ರವನ್ನಾಗಿ ಪರಿವರ್ತಿಸಬಹುದೆಂದರು.
ಹೇಮಾವತಿ ನದಿ ಉಗಮ ಸ್ಥಾನವನ್ನು ತಲಕಾವೇರಿ ಮಾದರಿಯಲ್ಲಿ ಅಭಿವೃದ್ದಿಸಬೇಕೆನ್ನುವ ಆಕಾಂಕ್ಷೆ ನಮ್ಮ ಮಲೆನಾಡಿನ ಭಾಗದ ಜನರ ಮನಸ್ಸಿನಲ್ಲಿದೆ. ಕಳೆದೊಂದು ದಶಕದಿಂದ ಮೂಡಿಗೆರೆ ಭಾಗದ ಹಿರಿಯರು, ಚಿಂತಕರು ಇದರ ಬಗ್ಗೆ ಆಲೋಚಿಸುತ್ತಿದ್ದಾರೆ. ಹಿರಿಯರ ಕನಸನ್ನು ನನಸು ಮಾಡುವ ಉದ್ದೇಶದಿಂದ ಹೇಮೆ ಹರಿಯುವ ಮತ್ತು ಹೇಮೆಯ ನೀರಿನ ಪ್ರಯೋಜನ ಪಡೆಯುತ್ತಿರುವ 06 ಜಿಲ್ಲೆಗಳ ಸಮಾನ ಮನಸ್ಕ ಚಿಂತರು ಸೇರಿ ಹೇಮಾವತಿ ನದಿ ಉಗಮ ಹಿತರಕ್ಷಣಾ ಟ್ರಸ್ಟ್ ರಚಿಸಿದ್ದೇವೆ. ಹೇಮಾವತಿ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಬೇಕಾದರೆ ರಾಜ್ಯ ಸರ್ಕಾರ ಮನಸ್ಸು ಮಾಡಬೇಕು. ಇದಕ್ಕಾಗಿ ಹೇಮಾವತಿ ಜಲಾನಯನ ವ್ಯಾಪ್ತಿಯ 06 ಜಿಲ್ಲೆಗಳ ಜನ ಧ್ವನಿಯೆತ್ತಿ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಬೇಕು. ಹೇಮಾವತಿ ನದಿಯ ಉಗಮ ಸ್ಥಾನವಾದ ಜಾವಳಿಯನ್ನು ತೀರ್ಥ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರವು ಪ್ರಾಧಿಕಾರವನ್ನು ರಚಿಸಿ ಸಭಾಭವನ, ಅತಿಥಿ ಗೃಹ, ಶುದ್ಧಗಂಗಾ ಕುಡಿಯುವ ನೀರಿನ ಘಟಕದ ಸ್ಥಾಪನೆ, ರಸ್ತೆಗಳ ಅಗಲೀಕರಣ, ಹೇಮಾವತಿ ಮತ್ತು ಸೋಮಾವತಿ ಉದ್ಯಾನವನಗಳ ನಿರ್ಮಾಣ, ಸಾರಿಗೆ ವ್ಯವಸ್ಥೆ, ಕೆರೆಗಳ ಹೂಳೆತ್ತುವುದು, ಹೇಮಾವತಿ ಹೆಬ್ಬಾಗಿಲು ಮತ್ತು ಪ್ರತಿಮೆ ನಿರ್ಮಾಣ, ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ, 06ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ಸಮ್ಮಿಲನದ ಹೇಮಾದ್ರಿ ಉತ್ಸವವನ್ನು ಪ್ರತೀವರ್ಷ ಆಯೋಜಿಸುವ ಮೂಲಕ ಜಾವಳಿಯನ್ನು ಸುಂದರ ಪ್ರವಾಸಿ ತಾಣ ಹಾಗೂ ಪವಿತ್ರ ತೀರ್ತ ಕ್ಷೇತ್ರವನ್ನಾಗಿಸಬಹುದು. ಹೇಮಾವತಿ ನದಿ ಒಡಲಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂದೆಯನ್ನು ನಿರ್ಭಂದಿಸುವುದು ಮತ್ತು ಹೇಮೆಯ ದಡದಲ್ಲಿರುವ ಪಟ್ಟಣಗಳು ಮತ್ತು ಕೈಗಾರಿಕೆಗಳಿಂದ ತ್ಯಾಜ್ಯದ ನೀರು ನದಿ ಸೇರದಂತೆ ತಡೆಹಿಡಿದು ಹೇಮೆಯನ್ನು ಸಂರಕ್ಷಿಸುವ ಮಹತ್ತರ ಕಾರ್ಯ ಮಾಡಬಹುದು ಎಂದ ಬಿ.ಆರ್.ಬಾಲಕೃಷ್ಣ ಪುಣ್ಯಕ್ಷೇತ್ರ ಹೊರನಾಡಿಗೆ ಹೋಗುವ ಪ್ರತಿಯೊಬ್ಬ ಭಕ್ತರು ಮಾರ್ಗಮಧ್ಯೆ ಇರುವ ಜಾವಳಿಗೆ ಭೇಟಿ ನೀಡಿ ಜಾವಳಿಯತ್ತ ಪ್ರವಾಸಿಗರನ್ನು ಆಕರ್ಷಿಸುವಂತೆ ಮನವಿ ಮಾಡಿದರು.
ಹೇಮಾವತಿ ಪ್ರತಿಮೆಯೊಂದಿಗೆ ನದಿಯ ಕುರಿತ ಸಾಕ್ಷ ಚಿತ್ರದ ವಾಹನದ ಸಂಚಾರಿ ಪ್ರದರ್ಶನ ನಡೆಸಿ ನದಿಯ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯವಾದ ಹೇಮಾವತಿ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಸಭೆಯಲ್ಲಿ ನಿರ್ಧರಿಸಲಾಯಿತು.
ರಾಜ್ಯ ಗೃಹಮಂಡಳಿ ಮಾಜಿ ಅಧ್ಯಕ್ಷ ಹಾಲಪ್ಪಗೌಡ, ಹೋರಾಟ ಸಮಿತಿಯ ಕಾರ್ಯದರ್ಶಿ ಎಂ.ವಿ. ಜಗಧೀಶ್, ನಿರ್ದೇಶಕರಾದ ಟಿ.ಪಿ.ಸುರೇಂದ್ರ, ಬಿ.ಎಂ.ಸುರೇಶ್, ಶಶಿಧರ್, ಮನೋಹರ್, ಅನಂತ್, ಸಮಾಜ ಸೇವಕ ಮಲ್ಲಿಕಾರ್ಜುನ, ಪುಣ್ಯಭೂಮಿ ಸಂಸ್ಥೆಯ ಅಧ್ಯಕ್ಷ ವಿಠಲಾಪುರ ಸುಬ್ಬೇಗೌಡ, ಹಿರಿಯ ಪತ್ರಕರ್ತರಾದ ಎಂ.ಕೆ.ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ್, ಕೆ.ಆರ್.ನೀಲಕಂಠ, ಬಲ್ಲೇನಹಳ್ಳಿ ಮಂಜುನಾಥ್, ಮರುವನಹಳ್ಳಿ ಬಸವರಾಜು ಸಭೆಯಲ್ಲಿ ಮಾತನಾಡಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಗೌಡ, ಮುಖಂಡರಾದ ರಾಮಸ್ವಾಮಿ, ದೇವೇಗೌಡ, ಬಿ.ಸಿ.ಎಸ್ ಕುಮಾರ್, ಸಿಂಧಘಟ್ಟ ನಾಗೇಶ್ ಸೇರಿದಂತೆ ಹಲವು ಪ್ರಗತಿಪರ ಚಿಂತಕರು ಭಾಗವಹಿಸಿದ್ದರು.