ಕಾಂಗ್ರೇಸ್ ಪಕ್ಷ ದಿವಾಳಿಯಾಗಿದೆ: ಈಶ್ವರ ಖಂಡ್ರೆಯವರಿಗೆ ಹಲವು ಪ್ರಶ್ನೆ ಕೇಳಿದ ಭಗವಂತ ಖೂಬಾ
ಬೀದರ:ಏ.17: ಬೀದರ ಜಿಲ್ಲೆ ಹಿಂದುಳಿಯಲು ಈಶ್ವರ ಖಂಡ್ರೆ ಹಾಗೂ ಅವರ ಕುಟುಂಬವೇ ಕಾರಣ ಎಂದು ಕೇಂದ್ರ ಸಚಿವರು ಹಾಗೂ ಬೀದರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ನೇರ ಆರೋಪ ಮಾಡಿದರು. ಖಂಡ್ರೆ ಕುಟುಂಬ 65 ವರ್ಷಗಳಿಂದ ಅಧಿಕಾರ ಮಾಡುತ್ತ ಬಂದಿದೆ. ಆದರೂ ಕೂಡಾ ಭಾಲ್ಕಿಯಲ್ಲಿ ಒಂದೇ ಒಂದು ಸ್ಟೇಡಿಯಂ ನಿರ್ಮಾಣ ಮಾಡಲು ಅವರಿಂದ ಸಾಧ್ಯವಾಗಿಲ್ಲ ಎಂದು ಬೀದರ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಖೂಬಾ ಖಂಡ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೇಸ್ ಸರ್ಕಾರ ನೀಡಿದ ಐದು ಗ್ಯಾರಂಟಿಗಳು ಬೋಗಸ್ ಆಗಿವೆ. ಎಲ್ಲಾ ಬಸ್‍ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಫ್ರೀ ಎಂದವರು ಕೆಲವೇ ಬಸ್‍ಗಳಲ್ಲಿ ನೀಡಿದರು. ನಿರುದ್ಯೋಗ ಭತ್ಯೆ ಎಲ್ಲರಿಗೂ ಎಂದವರು 2023ರಲ್ಲಿ ಪದವಿ ಪಡೆದವರಿಗೆ ಮಾತ್ರ ಎಂದು ನಿಯಮ ಮಾಡಿದರು. ಹತ್ತು ಕೆಜಿ ಅಕ್ಕಿ ನೀಡುತ್ತೇವೆಂದು ನೀಡಲಿಲ್ಲ. ಎಲ್ಲಾ ಮಹಿಳೆಯರ ಓಟು ಪಡೆದು, ಮನೆಯ ಒಡತಿಗೆ ಮಾತ್ರ ಹಣ ನೀಡುತ್ತಿದ್ದಾರೆ. ಈ ಬಾರಿ ಬೋಗಸ್ ಗ್ಯಾರಂಟಿಗಳಿಗೆ ಜನ ಮೋಸ ಹೋಗಲ್ಲ ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ರೈತರು ಕಂಗಾಲಾಗಿದ್ದಾರೆ. ಇದುವರೆಗೂ ಸರ್ಕಾರ ರೈತರಿಗೆ ಬರ ಪರಿಹಾರ ನೀಡಿಲ್ಲ. ಎಂದು ತಿಳಿಸಿದರು. ಅಲ್ಲದೇ ಈಶ್ವರ ಖಂಡ್ರೆಯವರಿಗೆ ಭಗವಂತ ಖೂಬಾ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಮತ್ತು ಅವುಗಳಿಗೆ ಉತ್ತರಿಸುವಂತೆಯೂ ತಿಳಿಸಿದ್ದಾರೆ. 65 ವರ್ಷಗಳಿಂದ ನಿಮ್ಮ ಕುಟುಂಬ ಭಾಲ್ಕಿಯಲ್ಲಿ ಅಧಿಕಾರ ನಡೆಸಿದರೂ ಒಂದೇ ಒಂದು ಸ್ಟೇಡಿಯಂ ನಿರ್ಮಾಣ ಆಗಿಲ್ಲ ಯಾಕೆ? ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ 200 ಕೋಟಿ ಬೆಲೆಯದ್ದಾಗಿದೆ. ಆದರೆ ನೀವು 500 ಕೋಟಿ ಸಾಲ ಮಾಡಿದ್ದು ಏಕೆ? ಬೊಮ್ಮಾಯಿ ಸರ್ಕಾರ ಇದ್ದಾಗ ಮೆಹಕರ್ ಏತ ನೀರಾವರಿ ಯೋಜನೆಗಾಗಿ ಟೆಂಡರ್ ಕರೆದಿದ್ದರು. ಆದರೆ ನೀವು ಅದನ್ನು ರದ್ದುಗೊಳಿಸಿದ್ದು ಯಾಕೆ? ಇಂದಿಗೂ ಯೋಜನೆ ಪ್ರಾರಂಭವಾಗಿಲ್ಲ ಏಕೆ? ಬೀದರ ಜಿಲ್ಲಾ ಸಂಕೀರ್ಣ ನಿರ್ಮಾಣ ಮಾಡಿಲ್ಲ ಏಕೆ? ಔರಾದ ರಿಂಗ್ ರಸ್ತೆ ಮಾಡುವಲ್ಲಿ ಉದಾಸೀನ ಏಕೆ? ಕೇಂದ್ರ ಸೀಪೆಟ್ ಕಟ್ಟಡದ ರಾಜ್ಯ ಸರ್ಕಾರದ ಪಾಲಿನ ಹಣ ಕೊಡಿಸಲಿಲ್ಲ ಏಕೆ? ಅನುಭವ ಮಂಟಪ ನಿರ್ಮಾಣಕ್ಕಾಗಿ ಅನುದಾನ ನೀಡುವುದರಲ್ಲಿ ಉದಾಸೀನ ಮಾಡುತ್ತಿರುವುದೇಕೆ? ಎಂಬ ಹಲವು ಪ್ರಶ್ನೆಗಳಿಗೆ ಖಂಡ್ರೆಯವರು ಉತ್ತರ ನೀಡಬೇಕೆಂದು ಖೂಬಾ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಸುಮಾರು 16 ಲಕ್ಷ 13 ಸಾವಿರ ಜನರಿಗೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2 ಲಕ್ಷ 50 ಸಾವಿರ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಸುಮಾರು 2 ಲಕ್ಷ 50 ಸಾವಿರ ಜನರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಕಸಿತ ಭಾರತ ಸಂಕಲ್ಪವನ್ನು ತೊಟ್ಟಿದ್ದಾರೆ. ಅವರ ಕೈ ಬಲಪಡಿಸಬೇಕೆಂದು ಕೋರಿದರು. ಅಲ್ಲದೇ ಏಪ್ರಿಲ್ 18 ರಂದು ಭಗವಂತ ಖೂಬಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೇರಿದಂತೆ ಜಿಲ್ಲೆಯ ಶಾಸಕರು, ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂಎ ಸುಮಾರು 25 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಗಣೇಶ ಮೈದಾನದಿಂದ ಖಾದಿ ಭಂಡಾರ್, ಅಂಬೇಡ್ಕರ್ ವೃತ್ತದ ಮುಖಾಂತರವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಲಾಗುತ್ತಿದೆ ಎಂದು ಪಾಟೀಲ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಪ್ರಕಾಶ ಖಂಡ್ರೆ, ರಾಜಸೇಖರ ನಾಗಮೂರ್ತಿ, ಶ್ರೀನಿವಾಸ ಚೌಧರಿ, ಬಾಬು ವಾಲಿ ಉಪಸ್ಥಿತರಿದ್ದರು.