ದೇಶದ ಭದ್ರತೆ ಮತ್ತು ಐಕ್ಯತೆಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಶಾಸಕ ಎಂ.ವೈ
ಅಫಜಲಪುರ:ಏ.17: ಈ ಬಾರಿಯ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಏಕೆಂದರೆ ದೇಶದ ಭದ್ರತೆ, ಐಕ್ಯತೆ ಮತ್ತು ಅಖಂಡತೆಯ ಸಲುವಾಗಿ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಮತದಾರರು ಜಾಗೃತರಾಗಬೇಕು ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 10 ವರ್ಷಗಳಾದರೂ ಕೂಡ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಮತ್ತು ಅವರ ಕ್ಯಾಬಿನೆಟ್ ನ ಮಂತ್ರಿಗಳು ಯಾರು ಎಂಬುದೇ ಇನ್ನೂ ದೇಶದ ಜನರಿಗೆ ಗೊತ್ತಿಲ್ಲ ಕೇವಲ ಮೋದಿ ಹೆಸರು ಮಾತ್ರ ಗೊತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಬಂಡವಾಳ ಶಾಹಿಗಳ ಪರವಾಗಿರುವ ಕೇಂದ್ರದ ಬಿಜೆಪಿ ಸರ್ಕಾರದಿಂದ ದೇಶದ ಆರ್ಥಿಕ ಸ್ಥಿತಿಗತಿ ಹದಗೆಟ್ಟು ಜನಸಾಮಾನ್ಯರನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ.
ಕೇಂದ್ರದ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರ ಪತಿ ಹಾಗೂ ಭಾರತದ ರಾಜಕೀಯ ಅರ್ಥಶಾಸ್ತ್ರಜ್ಞ ಹಾಗೂ ಸಾಮಾಜಿಕ ವಿಮರ್ಶಕ ಡಾ. ಪರಕಾಲ ಪ್ರಭಾಕರ್ ಅವರ ಹೇಳಿಕೆಯ ಪ್ರಕಾರ, ದೇಶದ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ ಮತ್ತು ಆರ್ಥಿಕ ದಿವಾಳಿತನ ಬರುತ್ತದೆ ಹೀಗಾಗಿ ಜನರು ಜಾಗೃತರಾಗಬೇಕು ಎಂದು ಹೇಳಿರುವ ಮಾತು ಅಕ್ಷರಶಃ ಸತ್ಯ ಎಂದು ಭಾಸವಾಗುತ್ತಿದೆ. ಬಿಜೆಪಿಗರು ಧರ್ಮ ಮತ್ತು ಜಾತಿಗಳ ಮಧ್ಯೆ ಜಗಳ ಹಚ್ಚುತ್ತಾ ಸಂವಿಧಾನವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಹೊರಟಿದ್ದಾರೆ. ಹೀಗಾಗಿ ಇಂತಹ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು.
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದು ಕಾಂಗ್ರೆಸ್ ಸರ್ಕಾರ. ಐದು ಗ್ಯಾರಂಟಿ ಯೋಜನೆಗಳಿಂದ ರೈತರ ಹಾಗೂ ಜನರ ಆರ್ಥಿಕ ಸ್ಥಿತಿಗತಿ ಸುಧಾರಣೆಗೊಂಡಿದೆ.
ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಅಭಿವೃದ್ಧಿ ಪರ ಚಿಂತನೆಗಳಿಂದ ಇಂದು ಕಲಬುರಗಿ ಜಿಲ್ಲೆಯನ್ನು ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದಾರೆ. 371 (ಜೆ) ಕಲಂ, ಇಎ??? ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ ಹೀಗೆ ಅನೇಕ ದೊಡ್ಡ ಮಟ್ಟದ ಯೋಜನೆ ಹಾಗೂ ಕಾಮಗಾರಿಗಳನ್ನು ತರುವ ಮೂಲಕ ಜಿಲ್ಲೆಯ ಏಳಿಗೆಗೆ ಶ್ರಮ ವಹಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು ನಮ್ಮ ಪಕ್ಷದಿಂದ ಚದುರಿ ಹೋದ ಕಾರ್ಯಕರ್ತರು ಹಾಗೂ ಮುಖಂಡರ ಮನ ಒಲಿಸಿದ್ದೇವೆ ಮತ್ತು ಅವರೆಲ್ಲರೂ ಈಗಾಗಲೇ ನಮ್ಮ ಪಕ್ಷಕ್ಕೆ ಬರಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದ ಅವರು ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲುವುದಿಲ್ಲ ಎಂದೇ ಭಾವಿಸಿದ್ದೆವು. ಆದರೆ ಹಲವು ಕಾರಣಾಂತರಗಳಿಂದ ನಾವು ಹೀನಾಯ ಸೋಲು ಅನುಭವಿಸಬೇಕಾಯಿತು. ಆದರೆ ಈ ಬಾರಿ ನಮಗೆ ಸೋಲು ಮರುಕಳಿಸುವುದಿಲ್ಲ. ಏಕೆಂದರೆ ನಮ್ಮ ಪಕ್ಷಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರು, ಜನರ ಹಾವ-ಭಾವ ಉತ್ಸಾಹ ನೋಡಿದರೆ ಈ ಸಲ ಭಾರೀ ಬಹುಮತಗಳ ಅಂತರದಿಂದ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿಯವರು ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಎಸ್.ವೈ ಪಾಟೀಲ್, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್, ಶರಣು ಕುಂಬಾರ, ದಯಾನಂದ ದೊಡ್ಮನಿ ಅನೇಕರಿದ್ದರು.