ಸಾಮರಸ್ಯ ವೇದಿಕೆಯಿಂದ ಅಂಬೇಡ್ಕರ್ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.17; ಅಂಬೇಡ್ಕರ್ ಚಿಂತನೆಗಳಲ್ಲಿನ ಆಯ್ದ ಅಂಶಗಳನ್ನಷ್ಟೇ ಉಲ್ಲೇಖಿಸಿ ದೇಶದ ಹಿತಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿರಿಯ ವಕೀಲ ಎಂ.ಸಿ.ಎಂ.ತೀರ್ಥಪ್ಪ ಬೇಸರ ವ್ಯಕ್ತಪಡಿಸಿದರು.ನಗರದ ಜಯನಿವಾಸದಲ್ಲಿ  ಸಾಮರಸ್ಯ ವೇದಿಕೆಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್  133ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಅಂಬೇಡ್ಕರ್ ಮತ್ತು ಸಾಮರಸ್ಯ ಕುರಿತು ಉಪನ್ಯಾಸ ನೀಡಿದರು.ಪ್ರಖರ ರಾಷ್ಟಿçÃಯತೆ ಪ್ರತಿಪಾದಕರಾಗಿದ್ದ ಅಂಬೇಡ್ಕರ್ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಭಾರತದ ಅಖಂಡತೆಗೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಭಾಷಾವಾರು ಪ್ರಾಂತ್ಯ ರಚನೆಯನ್ನೂ ಕೂಡ ಅಂಬೇಡ್ಕರ್ ವಿರೋಧಿಸಿದ್ದರು. ಭಿನ್ನ ಸಂಸ್ಕöÈತಿಯ ಜನರನ್ನು ಬೆಸೆಯಲು ರಾಷ್ಟಿçÃಯತೆ ಚಿಂತನೆ ಅಗತ್ಯವೆಂದು ಮನಗಂಡಿದ್ದರು. ಭಾರತಕ್ಕೆ ಎದುರಾಗಲಿರುವ ಮತೀಯ ಆತಂಕಗಳ ಬಗ್ಗೆ ಅಂಬೇಡ್ಕರ್ ಗೆ ಸ್ಪಷ್ಟತೆ ಇತ್ತು. ಇದನ್ನೆಲ್ಲಾ ಮರೆಮಾಚಿ ಆಯ್ದ ಅಂಶಗಳನ್ನಷ್ಟೇ ಉಲ್ಲೇಖಿಸುತ್ತಾ, ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಅಗೌರವ ಮಾಡಲಾಗುತ್ತಿದೆ. ಅಂಬೇಡ್ಕರ್ ರ ಸಮಗ್ರ ಚಿಂತನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಅವರು ಆಶಿಸಿದರು.ಧರ್ಮದ ಆಧಾರದಲ್ಲಿ ದೇಶ ವಿಭಜನೆಗೊಂಡ ಸಂದರ್ಭದಲ್ಲಿ ಶೇ.100ರಷ್ಟು ಹಿಂದೂ ಮತ್ತು ಮುಸ್ಲಿಂ ಜನರ ವಿನಿಮಯ ಆಗಬೇಕೆಂಬುದು ಅಂಬೇಡ್ಕರ್ ಆಗ್ರಹವಾಗಿತ್ತು. ಇಸ್ಲಾಂ, ಕ್ರಿಶ್ಚಿಯನ್ ಸೇರಿದಂತೆ ನಾನಾ ಮತಗಳ ಬಗ್ಗೆ ಅಧ್ಯಯನ ಮಾಡಿದ್ದ ಅಂಬೇಡ್ಕರ್, ಎಲ್ಲವನ್ನೂ ನಿರಾಕರಿಸಿ ಮಾನವೀಯ ನೆಲೆಯಲ್ಲಿರುವ ಬೌದ್ಧಮತವನ್ನು ಸ್ವೀಕರಿಸಿದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ನಿರ್ಧಿಷ್ಟ ಸಮುದಾಯವನ್ನು ಓಲೈಸುವ ಸಲುವಾಗಿ ಇಂತಹ ಸಂಗತಿಗಳನ್ನು ಯಾರು ಹೇಳುತ್ತಿಲ್ಲ ಎಂದರು.ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ಅಸ್ಪöÈಶ್ಯತೆಯಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಬಹಳಷ್ಟು ಶ್ರಮಪಟ್ಟರು. ಆದರೆ ಅಂದಿನ ಸಮಾಜವು ಅವರ ಸುಧಾರಣೆಗೆ ಸ್ಪಂದಿಸದ ಕಾರಣ ಅನಿವಾರ್ಯವಾಗಿ ಬೌದ್ಧ ಮತವನ್ನು ಸ್ವೀಕರಿಸಿದರು. ಪರ-ವಿರೋಧಕ್ಕೆ ಹಿಂದೂ ಧರ್ಮ ಅವಕಾಶ ಕಲ್ಪಿಸಿರುವುದರಿಂದಲೇ ಇದು ಸಾಧ್ಯವಾಯಿತು. ಬೇರೆ ಧರ್ಮಗಳಲ್ಲಿ ಅಂತಹ ಅವಕಾಶ ಇಲ್ಲ. ಅಂಬೇಡ್ಕರ್ ಚಿಂತನೆಗಳನ್ನು ಪಾಲಿಸದೆ ಸಂವಿಧಾನ ಅನುಸರಿಸಲಾಗದು. ದೇಶದ ಅಖಂಡತೆ ದೃಷ್ಟಿಯಿಂದ ಜನಮಾನಸಕ್ಕೆ ಅಂಬೇಡ್ಕರ್ ಚಿಂತನೆಗಳನ್ನು ಪಸರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ರವಿ ಮಾತನಾಡಿ, ರಾಜಕೀಯ ಕಾರಣಕ್ಕಾಗಿ ದಲಿತ ಸಮುದಾಯವನ್ನು ಓಲೈಸುವ ಸಲುವಾಗಿ ಅಂಬೇಡ್ಕರ್ ಅವರನ್ನು ವೈಭವಿಕರಿಸುವ ಕೆಲಸವಾಗುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್ನರೊಂದಿಗೆ ಮುಕ್ತವಾಗಿ ವ್ಯವಹರಿಸುವವರು ದಲಿತರನ್ನು ದೂರವಿಡುತ್ತಿದ್ದಾರೆ. ಇಂದಿಗೂ ಹಳ್ಳಿಗಳಲ್ಲಿ ದಲಿತರಿಗೆ ಮೇಲ್ವರ್ಗದವರ ಮನೆ, ದೇವಸ್ಥಾನದೊಳಗೆ ಪ್ರವೇಶವಿಲ್ಲ. ಇದರಿಂದ ಬೇಸತ್ತು ದಲಿತರು ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ. ಮೊದಲು ಗ್ರಾಮಾಂತರ ಪ್ರದೇಶದಲ್ಲಿ ಪರಿಸ್ಥಿತಿ ಬದಲಾಗಬೇಕು. ಇಂತಹ ಕಾರ್ಯಕ್ರಮಗಳು ನಗರ ಪ್ರದೇಶಕ್ಕೆ ಸೀಮಿತವಾಗದೆ, ಗ್ರಾಮೀಣ ಪ್ರದೇಶದಲ್ಲಿ ನಡೆಯಬೇಕು. ಜಯಂತಿಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಂದರು.