ಹರಪನಹಳ್ಳಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪಣ – ಗಾಯಿತ್ರಿ ಸಿದ್ದೇಶ್ವರ್

ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಏ.೧೭ : ಪ್ರಾದೇಶಿಕ ಅಸಮತೋಲನೆ ನಿವಾರಿಸುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಎಲ್ಲ ಸೌಲಭ್ಯಗಳು ಹರಪನಹಳ್ಳಿ ತಾಲೂಕಿಗೆ ದೊರೆಯಬೇಕು. ಉದ್ಯೋಗದಲ್ಲಿ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಹರಪನಹಳ್ಳಿ ತಾಲೂಕು 371 ಜೆ ಕಲಂ ಅಡಿ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ, ನಂತರ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಂಡಿದೆ. ಉದ್ಯೋಗಕ್ಕಷ್ಟೇ ಸೀಮಿತವಾಗದೆ ಹರಪನಹಳ್ಳಿ ತಾಲೂಕಿನ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.ಹರಪನಹಳ್ಳಿ ತಾಲೂಕಿನ ಕುಂಚೂರು, ಹಲವಾಗಲು, ನಿಟ್ಟೂರು ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಹರಪನಹಳ್ಳಿ ತಾಲೂಕಿನ ಪ್ರಾದೇಶಿಕ ಅಸಮತೋಲನೆ ನಿವಾರಣೆ ಆಗಬೇಕು. ಭೌತಿಕವಾಗಿ ಹರಪನಹಳ್ಳಿ ತಾಲೂಕಿನ ಚಿತ್ರಣ ಬದಲಾಗಬೇಕು. ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ಯುವಕರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತರಲು ನಾನು ಶ್ರಮಿಸುತ್ತೇನೆ ಎಂದರು.ಹರಪನಹಳ್ಳಿ ತಾಲೂಕಿನ ಅನೇಕ ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಿವೆ. ಈ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರಿಗೆ ಸಲ್ಲುತ್ತದೆ. ಈ ಭಾಗದ ರೈತರು ಹೆಚ್ಚಾಗಿ ತರಕಾರಿ, ಚೆಂಡು ಹೂವುಗಳನ್ನು ಬೆಳೆಯುತ್ತಾರೆ. ಇದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಲು ಚಿಂತನೆ ನಡೆಯುತ್ತಿದೆ. ತರಕಾರಿ ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದೇನೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಈಗಾಗಲೇ ದಾವಣಗೆರೆ ಹಾಗೂ ಚನ್ನಗಿರಿ ತಾಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೋದಿ ಜೀ ಜಾರಿಗೆ ತಂದಿರುವ ಅನೇಕ ಯೋಜನೆಗಳು ಜನರನ್ನು ಆರ್ಥಿಕವಾಗಿ ಬಲಪಡಿಸಿವೆ. ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಅಡಿ ಹರಪನಹಳ್ಳಿ ತಾಲೂಕಿನ ಸಣ್ಣ ರೈತರಿಗೆ ಈ ವರ್ಷದಲ್ಲಿ ಮಧ್ಯಂತರ ಪರಿಹಾರವಾಗಿ ಅಂದಾಜು 13 ಕೋಟಿ ರೂಪಾಯಿ ವಿಮೆ ಹಣ ಬಂದಿದೆ. ಇನ್ನು ಸ್ವಲ್ಪ ದಿನದಲ್ಲಿ 20 ಕೋಟಿ ವಿಮೆ ಹಣ ಬರಲಿದೆ ಎಂದರು.ಈ ದೇಶದ ಜನ ನರೇಂದ್ರ ಮೋದಿ ಅವರೇ ಮೂರನೇ ಬಾರಿಗೆ ಪ್ರಧಾನಿ ಆಗಬೇಕು ಎಂದು ಭಯಸುತ್ತಿದ್ದಾರೆ. ನರೇಂದ್ರ ಮೋದಿ ಅವರ 10 ವರ್ಷಗಳ ಆಡಳಿತ ಇಡೀ ವಿಶ್ವವೇ ಭಾತರದತ್ತ ತಿರುಗಿ ನೋಡುಂತೆ ಮಾಡಿದೆ. ಈ ಬಾರಿಯೂ ಅವರು ಪ್ರಧಾನಿ ಆಗಬೇಕು ಎಂಬುದು ಸಾಮಾನ್ಯ ಜನರ ಅಭಿಲಾಷೆ. ನೀವು ಇಲ್ಲಿ ನನಗೆ ಹಾಕುವ ಒಂದೊಂದು ಮತವೂ ಮೋದಿ ಅವರಿಗೆ ಮತ ಹಾಕಿದಂತೆ. ನೀವು ಇಲ್ಲಿ ನನ್ನನ್ನು ಗೆಲ್ಲಿಸಿದರೆ ಅಲ್ಲಿ ಮೋದಿ ಅವರ ಕೈ ಬಲಪಡಲಿದೆ. ಮತದಾನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇದ್ದು, ಭಾಜಪ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಮತ್ತು ಸಿದ್ದೇಶ್ವರ್ ಅವರ ಸಾಧನೆಗಳನ್ನು ತಿಳಿಸುವ ಮೂಲಕ ನನಗೆ ಹೆಚ್ಚಿನ ಮತ ಹಾಕಿಸಬೇಕು ಎಂದು ಮನವಿ ಮಾಡಿದರು.ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಮಾಡಿರುವ ಅಭಿವೃದ್ಧಿ ಕೆಲಸಗಳು ಇಡೀ ವಿಶ್ವಕ್ಕೆ ಮಾದರಿ. ಕೋವಿಡ್ ಅಂತಹ ಸಂದರ್ಭದಲ್ಲಿ ದೇಶದ 140 ಕೋಟಿ ಜನರಿಗೆ ಎರಡೆರಡು ಬಾರಿ ಲಸಿಕೆ ಮತ್ತು ಬೂಸ್ಟರ್ ಡೋಸ್ ಕೊಡಿಸಿ ಎಲ್ಲರ ಜೀವ ಕಾಪಾಡಿದ್ದಾರೆ. ಜನ್ ಧನ್ ಖಾತೆ, ಸ್ವಚ್ಛ ಭಾರತ್, ಆಯುಷ್ಮಾನ್ ಭಾರತ್, ಮೇಕ್ ಇನ್ ಇಂಡಿಯಾ, ಸ್ಟ್ರಾಟ್ ಅಪ್ ಇಂಡಿಯಾ, ಕೃಷಿ ಸನ್ಮಾನ್ ಯೋಜನೆ, ಫಸಲ್ ಭಿಮಾ ಯೋಜನೆ ಹೀಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದು ಎಲ್ಲ ವರ್ಗದ ನೆಚ್ಚಿನ ಪ್ರಧಾನಿಯಾಗಿದ್ಧಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವ ಕ್ಷಣ ಕಣ್ತುಂಬಿಕೊಳ್ಳಲು ವಿಶ್ವವೇ ಕಾದು ಕುಳಿತಿದೆ. ಇಂತಹ ಸನ್ನಿವೇಶಕ್ಕೆ ನಾವು-ನೀವು ಕಾರಣೀಭೂತರಾಗಬೇಕು ಎಂದರೆ ದಾವಣಗೆರೆ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅಕ್ಕ ಗೆಲವು ಸಾಧಿಸಬೇಕು ಎಂದರು.ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ 10 ವರ್ಷ ನೀವು ನೋಡಿರುವುದು ಟ್ರೈಲರ್, ಇನ್ನೂ ಪಿಕ್ಚರ್ ಬಾಕಿ ಇದೆ ಎಂದು. 10 ವರ್ಷದ ಟ್ರೈಲರ್ ನಲ್ಲಿಯೇ ದೇಶ ಇಷ್ಟು ಅಭಿವೃದ್ಧಿ ಕಂಡಿದೆ ಅಂದರೆ ಇನ್ನೂ 20 ವರ್ಷ ಅವರ ಕೈಯಲ್ಲಿ ಅಧಿಕಾರ ಇದ್ದರೆ ದೇಶ ಇನ್ನೆಷ್ಟು ಅಭಿವೃದ್ಧಿ ಹೊಂದಬಹುದು ನೀವೇ ಯೋಜನೆ ಮಾಡಿ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಾಯಿತ್ರಿ ಸಿದ್ದೇಶ್ವರ್ ಅಕ್ಕನವರನ್ನು ಗೆಲ್ಲಿಸುವುದು, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಸಂಕಲ್ಪ ಆಗಬೇಕು ಎಂದು ಕರೆ ನೀಡಿದರು.ಬಿಜೆಪಿ ಮುಖಂಡರಾದ ಲೋಕೇಶ್, ಶೇಖರಪ್ಪ, ಕಲ್ಲಣ್ಣ ಗೌಡ, ಮಂಜುನಾಥ್, ವೀರಭದ್ರಪ್ಪ, ಮಹಾಂತೇಶ್, ಬಸವರಾಜ್,  ಹೇಮಣ್ಣ, ಅಂಜಿನಪ್ಪ, ನಾಗರಾಜ್, ವೀರಣ್ಣ, ಮಂಡಲದ ಅಧ್ಯಕ್ಷರು , ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.