ವೈಭವದ ಸಂಗೀತ ರುದ್ರಾಭಿಷೇಕ
ಭಾಲ್ಕಿ:ಏ.16: ಪವಾಡ ಪುರುಷ ಶ್ರೀ ಸಿದ್ದಲಿಂಗೇಶ್ವರರ ಜಾತ್ರಾ ಮಹೋತ್ಸವ ನಿಮಿತ್ಯ ವೇದಮೂರ್ತಿ ಶ್ರೀ ಕರಬಸಯ್ಯಾ ಮಹಾಸ್ವಾಮಿಗಳು ಗೋರ್ಟಾ(ಬಿ) ಯವರ ನೇತೃತ್ವದಲ್ಲಿ ಸಂಗೀತ ರುದ್ರಾಭಿಷೇಕ ನಡೆಯಿತು.
ರವಿವಾರ ಬೆಳಿಗ್ಗೆಯಿಂದಲೇ ಷಟಸ್ಥಲ ಧ್ವಜಾರೋಹಣ ಹಾಗು ಪಥ ಸಂಚಲನದೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ನೂರಾರು ಸ್ವಾಮೀಜಿಗಳ ಸಾನಿಧ್ಯದಲ್ಲಿ ಸಂಗೀತ ರುದ್ರಾಭಿಷೇಕ ನಡೆಸಿರಿವುದು ಗ್ರಾಮಸ್ಥರಲ್ಲಿಯ ಭಕ್ತಿ ಭಾವಕ್ಕೆ ಸಾಕ್ಷಿಯಾಯಿತು. ಸಂಗೀತ ರುದ್ರಾಭಿಷೇಕ ಕಾರ್ಯಕ್ರಮದಿಂದ ಗ್ರಾಮದಲ್ಲಿ ಸಮೃಧಿ ಮೂಡುವುದು ಎನ್ನುವ ಪ್ರತೀತಿ ಇದೇ. ಈ ಕಾರಣಕ್ಕಾಗಿ ಪ್ರತಿವರ್ಷ ಸಿದ್ದೇಶ್ವರ ಗ್ರಾಮದಲ್ಲಿ, ಜಾತ್ರಾ ಮಹೋತ್ಸವ ನಿಮಿತ್ಯ ಸಂಗೀತ ರುದ್ರಾಭಿಷೇಕ ನಡೆಸಲಾಗುವುದು ಎನ್ನುತ್ತಾರೆ ದೇವಸ್ಥಾನ ಕಮಿಟಿಯ ಸದಸ್ಯರು.
ಸ್ವಾಮೀಜಿಗಳ ಅಂತರಾಳದಿಂದ ಬರುವ ಮಂತ್ರಘೋಷ, ದೇವಸ್ಥಾನ ಸೇರಿದಂತೆ ಗ್ರಾಮದಎಲ್ಲಾ ಸ್ಥಳಗಳನ್ನೂ ಪರಿಶುದ್ಧ ಗೊಳಿಸುತ್ತದೆ. ಗ್ರಾಮದ ನೂರಾರು ಜನರು ಸಂಗೀತ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುನಿತರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕರಬಸಯ್ಯಾ ಸ್ವಾಮಿ ಗೋರ್ಟಾ, ಜೀವನದಲ್ಲಿ ಸುಖ, ದುಖಗಳು ಬರುತ್ತವೆ. ಇವೆಲ್ಲವನ್ನೂ ದೇವರ ಅನುಗ್ರಹ ಎಂದು ಸಮಾನಾಗಿ ಕಂಡರೆ ಜೀವನ ಸಾರ್ಥಕವಾಗುವುದು ಎಂದು ಹೇಳಿದರು. ನಂತರ ಬಸವಣ್ಣನವರ ಮೆರವಣಿಗೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಲಾಯಿತು.