ಜಗತ್ತಿನ ಶ್ರೇಷ್ಠ ಸಿದ್ಧಾಂತ ವೀರಶೈವ ಸಿದ್ಧಾಂತವಾಗಿದೆ : ಉಜ್ಜಯನಿ ಜಗದ್ಗುರು
ಔರಾದ :ಏ.16: ಮಠಗಳಿರುವುದೇ ಧರ್ಮಪ್ರಸಾರಕ್ಕೆ. ಹಿಂದೆ ಋಷಿ ಪರಂಪರೆ ಇದ್ದರೆ ಈಗ ಮಠ ಪರಂಪರೆ ಇದೆ, ನಾವೆಲ್ಲರು ಒಂದೇ ಎಂಬ ಸಮನ್ವಯತೆಯ ಭಾವದೊಂದಿಗೆ ಸ್ತ್ರೀ-ಪುರುಷ ಸಮಾನತೆ, ಸಹೋದರತ್ವವನ್ನು ಪೋಷಿಸಿಕೊಂಡು ಬರುವಂತಹ ಸದ್ಧರ್ಮ ಪರಂಪರೆಯೇ ವೀರಶೈವ ಲಿಂಗಾಯತ ಪರಂಪರೆಯಾಗಿದೆ ಜಗತ್ತಿನ ಶ್ರೇಷ್ಠ ಸಿದ್ಧಾಂತ ಯಾವುದಾದರು ಇದೆ ಅಂದ್ರೆ ಅದು ನಮ್ಮ ವೀರಶೈವ ಸಿದ್ಧಾಂತವಾಗಿದೆ ಎಂದು ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯರು ಸ್ವಾಮಿಜಿ ಹೇಳಿದರು.
ತಾಲೂಕಿನ ಹೆಡಗಾಪೂರ್ ಗ್ರಾಮದಲ್ಲಿ ಸೋಮವಾರ ನಡೆದ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಕೇದಾರಲಿಂಗ ಶ್ರೀಗಳ ಪಟ್ಟಾಧಿಕಾರ ಮಹೋತ್ಸವದಲ್ಲಿ ಮಾತನಾಡಿದ ಅವರು, ಪರಂಪರೆ ಯಾವತ್ತು ವಾಸ್ತವವಾಗಿರುತ್ತದೆ. ಪುರಾಣ ಮತ್ತು ಗ್ರಂಥಗಳು ಕಟ್ಟುಕಥೆಯಲ್ಲ. ಅದನ್ನು ತಿಳಿದುಕೊಳ್ಳುವ ಅರಿಯುವ ಮನೋಭಾವ ನಮ್ಮಲ್ಲಿ ಮೂಡಬೇಕು. ಇಂದಿಗೂ ಶ್ರೀಲಂಕಾದಲ್ಲಿ ಲಿಂಗಮಲೈ, ರೇಣುಕವನ, ರೇಣುಕಗ್ರಾಮ ಎಂಬ ಹೆಸರಿನ ಗ್ರಾಮಗಳಿವೆ. ನಮ್ಮ ದೇಶದಲ್ಲಿ ರೇಣುಕಾಚಾರ್ಯರ ಕುರಿತು ಹಗುರವಾಗಿ ಮಾತಾಡಲು ಯೋಚಿಸುವ ಜನರೆಲ್ಲರೂ ಒಂದೊಮ್ಮೆ ಶ್ರೀಲಂಕಾ ಭೇಟಿ ನೀಡುವಂತೆ ಸೂಚಿಸಿದರು.
ಇತಿಹಾಸಕಾರ ಸರ್‌ಜಾನ್ ಮಾರ್ಷಲ್ ಹರಪ್ಪ ಮತ್ತು ಮಹೇಂಜೊದಾರದಲ್ಲಿ ಶಿವಲಿಂಗ, ವೀರಶೈವ ಪರಂಪರೆಯ ಕುರುಹುಗಳು, ಸಾವಿರ ಸಂಖ್ಯೆ ಲಿಂಗಗಳು ಮತ್ತು ಪೂಜಾ ಸಾಮಗ್ರಿಗಳು ಇರುವುದು ಆಧಾರ ಸಹಿತ ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಪ್ರಖ್ಯಾತ ಉತ್ಖನನ ಶಾಸ್ತ್ರಜ್ಞರು ಹರಪ್ಪ ಮಹೆಂಜೋದಾರ ನಾಗರೀಕತೆ ೫ ಸಾವಿರ ವರ್ಷಗಳಿಗಿಂತ ಪುರಾತನವಾಗಿದ್ದು, ಅಷ್ಟೇ ಪುರಾತನವಾದ ನಮ್ಮ ಪರಂಪರೆಯನ್ನು ತಿಳಿಗಣ್ಣಿನಿಂದ ನೋಡುವಂತಹ ಔದಾರ್ಯದ ಮನಸ್ಥಿತಿ ನಮಗಿರಬೇಕು. ನಮ್ಮ ವೀರಶೈವ ಪರಂಪರೆ ಕೂಡ ಪ್ರಾಚೀನವಾಗಿದೆ. ನಮ್ಮವರಿಗೆ ನಾವು ವಿರೋಧಿಸುವುದು ಒಳ್ಳೆಯದಲ್ಲ ಎಂದರು.
ಬೇರೆ ದೇಶದಲ್ಲಿನ ಜನರು ನಮ್ಮ ದೇಶದ ಸಂಸ್ಕೃತಿ ಇಷ್ಟಪಡುತ್ತಾರೆ. ದುರಂತ ಅಂದರೆ ಶೇ. ೯೩% ಮುಸ್ಲಿಂ ಬಾಹುಳ್ಯ ಹೊಂದಿರುವ ಇಂಡೊನೇಷಿಯಾ ದೇಶದ ನೋಟಿನಲ್ಲಿ ಗಣಪತಿಯ ಭಾವಚಿತ್ರವಿದೆ. ನಮ್ಮ ದೇಶದಲ್ಲಿ ಅಂತಹದಕ್ಕೆ ವಿರೋಧವಿದೆ. ಸಂಸ್ಕೃತ ನಮ್ಮ ದೇಶದ ಸನಾತನ ಪರಂಪರೆಯ ಸ್ವತ್ತು
ಮನಸ್ಸಿನ ನೆಮ್ಮದಿಗಾಗಿ, ಆರೋಗ್ಯಕ್ಕಾಗಿ ದೇವನಾಗರಿ ಲಿಪಿ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆ ಹುಟ್ಟಿತ್ತು. ಪ್ರಯತ್ನ ಸಾಧುವಲ್ಲದ್ದು ನಮ್ಮದಲ್ಲ ಎಂಬ ಮನಸ್ಥಿತಿಯಿಂದ ಹೊರಬರಬೇಕಿದೆ. ಜರ್ಮನ್ ದೇಶದಲ್ಲಿ ಎರಡನೇ ಭಾಷೆ ಸಂಸ್ಕೃತ ಇದೆ. ಸಂಸ್ಕೃತ ನಮ್ಮ ದೇಶದ ಸನಾತನ ಪರಂಪರೆಯ ಸ್ವತ್ತು. ಇಂದು ಸಂಸ್ಕೃತ ಪ್ರತಿಯೊಬ್ಬರಿಗೂ ಕಲಿಸುವ ಅಗತ್ಯತೆ ಇದೆ. ಜಗತ್ತಿನಲ್ಲಿ ಶಿವ ಇದ್ದಾಗಿನಿಂದ ಶಿವಾಚಾರ್ಯರಿದ್ದಾರೆ. ಶಿವನನ್ನು ಬಿಟ್ಟು ಶಕ್ತಿ ಇಲ್ಲ, ಶಕ್ತಿಯನ್ನು ಬಿಟ್ಟು ಶಿವ ಇಲ್ಲ. ವೇದ ವೇದಾಂತಗಳು, ಆಗಮಗಳು, ಪುರಾಣಗಳು ಒಪ್ಪುವಂತಹ ಯಾವುದಾದರೂ ಸಿದ್ದಾಂತವಿದ್ದರೆ ಅದುವೇ ವೀರಶೈವ ಸಿದ್ದಾಂತವಾಗಿದೆ.
ವೀರಶೈವ ಸಿದ್ದಾಂತ ಜಗತ್ತಿನಲ್ಲಿ ಇಂದು ಅತಿ ಅವಶ್ಯಕವಾಗಿದೆ. ಸರ್ವಜನಾಂಗದ ಹಿತಕ್ಕಾಗಿ, ಮನುಕುಲದ ಒಳಿತಿಗಾಗಿ ಬೇಕಾಗಿದೆ. ಎಷ್ಟೋ ಧರ್ಮಗಳು ಹುಟ್ಟಿ ನಾಶವಾದರೂ ಕೂಡ ತನ್ನ ಸರಳ ಆಚರಣೆಗಳಿಂದ ಇಂದು ಜೀವಂತವಾಗಿರುವ ಧರ್ಮವೇ ಸನಾತನ ವೀರಶೈವ ಧರ್ಮ. ಪ್ರಸವ ಪೂರ್ವ ಸಂಸ್ಕಾರ ವೀರಶೈವ ಪರಂಪರೆಯಲ್ಲಿದೆ. ವಿಜ್ಞಾನದ ತಳಹದಿ ಮೇಲೆಯೇ ಇದೆಲ್ಲವೂ ಸಾಧ್ಯವೆಂಬುದು ಕೂಡ ಮರೆಯುವಂತಿಲ್ಲ. ಮಹಿಳೆಯರಿಗೆ ಶೇ.೩೩ ರಿಂದ ಶೇ.೫೦ಮೀಸಲಾತಿ ನೀಡಬೇಕೆನ್ನುವ ಪ್ರಸ್ತುತ ವಾದಕ್ಕೆ ಪೂರಕವಾಗಿ ವೀರಶೈವ ಪರಂಪರೆ ಅಂದೇ ನೀಡಿದೆ ಎಂದರೇ ಅತಿಶಯೋಕ್ತಿಯಲ್ಲ. ದೇವರಿಗೆ ನಿನ್ನೊಳಗೆ ಹುಡುಕಬೇಕು ಎಂಬ ಮಾತು ಈ ಪರಂಪರೆಯಲ್ಲಿದೆ. ದೀಕ್ಷಾ ಗುರುವಿನಿಂದ ಮಾತ್ರ ಸಾಧ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಹುಟ್ಟಿನಿಂದ ಅಲ್ಲ ಆಚರಣೆಯಿಂದ ವೀರಶೈವರಾಗಿ
ಉಳ್ಳವರು ಶಿವಾಲಯ ಮಾಡುವರು ಎಂಬ ಬಸವಣ್ಣನ ವಚನದಿಂದ ಕಲಿಬೇಕಾಗಿರುವುದು ಬಹಳ ಇದೆ. ಪ್ರತಿಯೊಬ್ಬರು ನಡೆದಾಡುವ ದೇವಸ್ಥಾನಗಳಾಗುತ್ತಿರಿ. ಧರ್ಮದ ಲಾಂಛನಕ್ಕೆ ನಾವೆಲ್ಲರೂ ಮಹತ್ವ ನೀಡಬೇಕು. ಜಾತಿಯಿಂದ, ಹುಟ್ಟಿನಿಂದ, ಧರ್ಮದಿಂದ ವೀರಶೈವರಾಗಬೇಡಿ. ಆಚರಣೆ ಅನುಸರಣೆಯಿಂದ ವೀರಶೈವ ಲಿಂಗಾಯತರಾಗಬೇಕು.
ನಿಷ್ಠುರವಾಗಿ ಮಾತಾಡಿದಾಗಲೇ ಬದಲಾವಣೆ ಆಗುತ್ತೆ. ಶಾಸ್ತ್ರದಲ್ಲಿ ಉಲ್ಲೇಖಿಸಿದಂತೆ ಈ ಹಿಂದೆ ೨೮ ಸಾವಿರ ಶಾಖಾ ಮಠಗಳು ಇದ್ವು ಆದರೆ ಇಂದು ಎಷ್ಟಿದ್ದಾವೆ ಎಂಬುದು ಆಲೋಚಿಸಬೇಕಾಗಿದೆ. ಬೀದರ್ ಜಿಲ್ಲೆಯಲ್ಲಿ ಚಾಂಬೋಳ, ಹೆಡಗಾಪೂರ್ ಮಠಗಳು ಇತಿಹಾಸ ಪ್ರಸಿದ್ಧವಾದ ಮಠಗಳು. ಹೆಡಗಾಪೂರ್ ಮಠದಲ್ಲಿ ಶಿವಲಿಂಗ ಶಿವಾಚಾರ್ಯರಿಂದ ಸಾಮಾಜಿಕ ಮೌಲ್ಯಗಳು ಬಿತ್ತುವ ಮೂಲಕ ಹೊಸದೊಂದು ಭಾಷ್ಯೆ ಬರೆದ ಕೀರ್ತಿ ಅವರಿಗೆ ಸಲ್ಲುತ್ತದೆ. ಸದ್ಧರ್ಮದ ಬೆಳಕಾಗಬೇಕು.
ಧರ್ಮನಿಷ್ಠೆ, ಸಾಮಾಜಿಕ ಕಳಕಳಿ ಹೊಂದಿರುವ ಕೇದಾರಲಿಂಗ ದೇವರಿಗೆ ನೇಮನಿಷ್ಟೆಯಲ್ಲಿ ಅಪಾರ ನಂಬಿಕೆ ಇದೆ. ಉಜ್ಜಯನಿ ಪೀಠದ ಬಗ್ಗೆ ಗೌರವವಿದೆ. ಜನಸಾಮಾನ್ಯರ ಬಗ್ಗೆ ಕಾಳಜಿ ಇದೆ ಎಂದು ಹಾರೈಸುತ್ತ. ಮಠಗಳು ಯಾವತ್ತು ಜನರ ಜೀವನಮಟ್ಟ ಸುಧಾರಿಸುವ ಕೇಂದ್ರವಾಗಬೇಕು. ಆಧ್ಯಾತ್ಮಿಕ ಸಂಗಮ ಎಂದರೇ ಜಾತಿ, ಜನಾಂಗ, ಧರ್ಮ ಭೇದವಿಲ್ಲದೇ ಅನ್ನ, ಅಕ್ಷರ, ಆಶ್ರಯ, ಆಧ್ಯಾತ್ಮ, ಅರಿವು ಎಂಬ ಪಂಚಸೂತ್ರಗಳು ನೀಡುವಂತಾಗಬೇಕು ಇದು ಹೆಡಗಾಪೂರ್ ಮಠ ಹಿಂದೆಯೂ ಮಾಡಿದೆ ಮುಂದೆಯು ಮಾಡುತ್ತೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಉಜ್ಜಯನಿ ಪೀಠ ಮತ್ತು ವೀರಶೈವ ಪರಂಪರೆ ಕುರಿತು ಮಾತನಾಡಿದರು. ಡಾ. ಸಿದ್ದರಾಮಯ್ಯ ಸ್ವಾಮಿ, ಶಿವಾನಿ ಸ್ವಾಮಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪೂಜ್ಯ ಶ್ರೀ ಶಂಕರಲಿಂಗ ಶಿವಾಚಾರ್ಯರು, ಬೀದರ್ ಜಿಲ್ಲೆಯ ಎಲ್ಲ ಮಠದ ಶಿವಾಚಾರ್ಯರು, ಹೆಡಗಾಪೂರ್ ಗ್ರಾಮದ ಮುಖಂಡರಾದ ಶ್ರೀಕಾಂತ ಸ್ವಾಮಿ, ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಪ್ರತೀಕ ಪ್ರಭು ಚವ್ಹಾಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.