ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು: ತಹಸೀಲ್ದಾರ್ ದಾಮಾ
ಚಿಟಗುಪ್ಪ :ಏ.16: ಅಂಬೇಡ್ಕರ್ ಅವರು, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮಾಡಿದ ಸಾಧನೆ ಅನನ್ಯ ಸಮಾನತೆ ಮತ್ತು ಮಾನವೀಯತೆಯನ್ನು ಗೌರವಿಸುವ ಅವರ ಚಿಂತನೆ ಎಲ್ಲರಿಗೂ ಆದರ್ಶವಾದುದು ಎಂದು ತಹಶೀಲ್ದಾರ್ ದಾಮಾ ಹೇಳಿದರು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜಯಂತಿಯ ನಿಮಿತ್ಯ ತಹಶೀಲ್ದಾರ್ ರವೀಂದ್ರ ದಾಮಾ ಬಾಬಾ ಸಾಹೇಬರ ಪುತ್ತಳಿಗೆ ಪೂಜೆ ಸಲ್ಲಿಸಿ, ಮಾತನಾಡುತ್ತಾ
ಭಾರತ ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ಶತಮಾನಗಳ ಕಾಲ ಶಾಶ್ವತವಾಗಿ ಉಳಿಯುವಂತ ಸಂವಿಧಾನ ನಮ್ಮದಾಗಿದೆ. ಪ್ರತಿಯೊಬ್ಬರೂ ಅಂಬೇಡ್ಕರ್ ರವರ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಡತನದಲ್ಲಿ ಹುಟ್ಟಿ ಪ್ರಪಂಚವೇ ತಿರುಗಿ ನೋಡುವಂತೆ, ದೇಶವೇ ಹೆಮ್ಮೆ ಪಡುವಂತೆ ಎತ್ತರಕ್ಕೆ ಬೆಳೆದವರು ಅಂಬೇಡ್ಕರ್. ಇವರು ನೀಡಿರುವ ಸಂವಿಧಾನದಿಂದಲೇ ದೇಶವು ಇಂದಿಗೂ ಸುಭೀಕ್ಷವಾಗಿ, ನ್ಯಾಯಯುತವಾಗಿ ಸಾಗುತ್ತಿದೆ ಎಂದು ಹೇಳಿದರು. ಪುರಸಭೆ ಸದಸ್ಯ ರಾಜದೀಪ ಜಾಬಾ ಮಾತನಾಡುತ್ತಾ ಭಾರತೀಯ ಇತಿಹಾಸದಲ್ಲಿ ಅನೇಕ ಸ್ವಾತಂತ್ರ ಹೋರಾಟಗಾರರು, ಸಮಾಜ ಸುಧಾರಕರು ತಮ್ಮ ಕೊಡುಗೆಗಳನ್ನು ನೀಡಿದ್ದು ಅದರಲ್ಲಿ ತಮ್ಮ ಹೋರಾಟದ ಮುಖಾಂತರ ಶೋಷಿತರನ್ನು, ದೀನ ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಯಾವಾಗಲೂ ಮಾದರಿಯಾಗಿ ಉಳಿಯುತ್ತಾರೆ ಎಂದರು. ಈ ಸಂದರ್ಭದಲ್ಲಿ ಸಿಪಿಐ ಶ್ರೀನಿವಾಸ ಅಲ್ಲಾಪುರ್, ಪಿಎಸ್ಐ ಬಾಷುಮಿಯಾ ಕೊಂಚೂರ್, ಡಾ ಶುಶೀಲಕುಮಾರ್, ಪುರಸಭೆ ಪರಿಸರ ಅಭಿಯಂತರ ಪೂಜಾ, ವೈಶಾಲಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮನೋಜಕುಮಾರ್ ಶರ್ಮಾ, ಕಲ್ಯಾಣರಾವ ಜಾಬಾ, ರಾಜಶೇಖರ ಉಪ್ಪಿನ, ಪ್ರಭು ಮುದನ್ನಳಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.