ಕಾಂಗ್ರೆಸ್ ಎಸ್ಸಿ, ಎಸ್ಟಿ ವಿರೋಧಿ: ಮಾಜಿ ಸಿಎಂ ಯಡಿಯೂರಪ್ಪ

ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೧೬; ಕಾಂಗ್ರೆಸ್ ನವರುಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ ಆದರೆ ನೆಹರೂ, ಇಂದಿರಾ ಗಾಂಧಿ ಕುಟುಂಬಕ್ಕೆ ನೀಡಿದರು. ನೆಹರೂ ಸಮಾಧಿಗೆ 52.6, ಇಂದಿರಾ ಗಾಂಧಿಗೆ 44 ಎಕರೆ, ರಾಜೀವ್ ಗಾಂಧಿ ಅವರ ಸಮಾಧಿಗೆ ಅವರಿಗೆ 15 ಎಕರೆ ನೀಡಲಾಗಿದೆ ಆದರೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಅಂಬೇಡ್ಕರ್ ಹುಟ್ಟಿದ ಊರನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಭಿವೃದ್ಧಿಪಡಿಸಿದ್ದಾರೆ. ಲಂಡನ್ ನಲ್ಲಿ ಓದಿದ ಜಾಗ ಖರೀದಿಸಿ ಹಾಸ್ಟೆಲ್ ಮಾಡಲಾಗಿದೆ. ಮುಂಬೈನ ಸಮಾಧಿ ಜಾಗ ಅಭಿವೃದ್ಧಿಪಡಿಸಿದೆ ಆದರೆ ಐವತ್ತು ವರ್ಷ ದೇಶವಾಳಿದ ಕಾಂಗ್ರೆಸ್ ನವರು ಅಂಬೇಡ್ಕರ್ ಗೆ ಹೆಜ್ಜೆ ಹೆಜ್ಜೆಗೆ ಅಪಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಬಲ ಇದೆ. ರಾಜ್ಯದಲ್ಲಿ ಎಲ್ಲಾ ಕಡೆ ಮೈತ್ರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ನಾವು 28 ಕ್ಷೇತ್ರಗಳಲ್ಲಿಯೂ ಗೆಲ್ಲಬೇಕೆಂಬ ಪ್ರಯತ್ನ ಮಾಡುತ್ತಿದ್ದೇವೆ. ಜೆಡಿಎಸ್ – ಬಿಜೆಪಿ ಮೈತ್ರಿಯಿಂದಾಗಿ ಗುರಿ ಮುಟ್ಟುತ್ತೇವೆ ಎಂಬ ವಿಶ್ವಾಸ ಇದೆ ಎಂದರು.ರಾಜ್ಯದಲ್ಲಿ 11 ಸಾವಿರ ಕೋಟಿ ರೂಪಾಯಿಯನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡಿದ ಹಣ ಬೇರೆ ಕಡೆ ನೀಡಲಾಗಿದೆ ಇದು ಆ ಸಮುದಾಯಕ್ಕೆ ಮಾಡಿದ ಅಪಮಾನ ಎಂದರು. ನಾನು 23 ಕ್ಷೇತ್ರಕ್ಕೆ ಹೋಗಿಬಂದಿದ್ದೇನೆ. ದೇವೇಗೌಡರು ಸಹ ಎನ್ ಡಿಎ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುವುದರಲ್ಲಿ ಅನುಮಾನ ಇಲ್ಲ. ನಿಶ್ಚಿತವಾಗಿ ಗಾಯತ್ರಿ ಸಿದ್ದೇಶ್ವರ ಗೆಲ್ಲುತ್ತಾರೆ. ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ದಿನ ಬರಲು ಪ್ರಯತ್ನ ಮಾಡ್ತೇನೆ ಎಂದರು.ಕಾಂಗ್ರೆಸ್ ನವರಿಗೆ ಲೋಕಸಭೆಯಲ್ಲಿ ತಕ್ಕ ಉತ್ತರ ಜನರೇ ನೀಡುತ್ತಾರೆ. ಯಾರುಎಲ್ಲಿ ಇರುತ್ತಾರೆ ಆಗ ಗೊತ್ತಾಗುತ್ತೆ. ಕಾಂಗ್ರೆಸ್ ನವರು ಪ್ರಧಾನಿ ಅಭ್ಯರ್ಥಿ ಹೆಸರು ಹೇಳಲಿ. ನರೇಂದ್ರ ಮೋದಿ ಮೂರನೇ ಬಾರಿಗೆ ದೊಡ್ಡ ಅಂತರದಲ್ಲಿ ಗೆದ್ದು ಅಧಿಕಾರಕ್ಕೆ ಬರುವುದು ಖಚಿತ. ಮತ್ತೆ ಮುಂದಿನ ಐದು ವರ್ಷದ ಕಾರ್ಯಕ್ರಮಗಳ ಯೋಜನೆ ಪ್ರಾರಂಭ ಆಗಿದೆ. ಬಿಜೆಪಿ, ಜೆಡಿಎಸ್ ಹಾಲುಜೇನಿನಂತೆ ಇರುತ್ತೆ. ಸಣ್ಣಪುಟ್ಟ ವ್ಯತ್ಯಾಸ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ,ಶಾಸಕ ಬಿ.ಪಿ ಹರೀಶ್ ,ಮಾಜಿ ಶಾಸಕ  ಹೆಚ್. ಎಸ್. ಶಿವಶಂಕರ್, ಎನ್. ರವಿಕುಮಾರ್,ಮಾಜಿ ಸಚಿವ ಮುರುಗೇಶ್ ನಿರಾಣಿ, ಯಶವಂತರಾವ್ ಜಾಧವ್, ರಾಜಶೇಖರ್ ನಾಗಪ್ಪ ಹಾಗೂ ಮುಖಂಡರಿದ್ದರು.