ಅನಿಮೇಶನ್- ಮಲ್ಟಿಮೀಡಿಯಾ ಮಾಧ್ಯಮ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೧೬; ದಾವಣಗೆರೆ ವಿ ವಿ ಯ ಆಡಳಿತಾಂಗ ಕುಲಸಚಿವ(ಪ್ರಭಾರ)ರಾದ ಡಾ.ಯು.ಎಸ್. ಮಹಾಬಲೇಶ್ವರ್ ದಾವಣಗೆರೆ ವಿ ವಿಯ ಘಟಕ ಕಾಲೇಜಾದ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದ ಅನಿಮೇಶನ್&ಮಲ್ಟಿಮೀಡಿಯಾ ವಿಭಾಗದ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಅನಿಮೇಶನ್&ಮಲ್ಟಿಮೀಡಿಯಾ ಮಾಧ್ಯಮ ಕಲಾಕೃತಿಗಳ ಪ್ರದರ್ಶನಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಕಲಾಕೃತಿಗಳನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದ ದಾವಣಗೆರೆಯ ಹಿರಿಯ ರಂಗಕರ್ಮಿ ಹಾಗೂ ಪತ್ರಕರ್ತ ಬಾ.ಮ.ಬಸವರಾಜಯ್ಯ,ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ ಚಿಕ್ಕ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ ಕುಮಾರ್ ಪಿ.ವಲ್ಲೇಪುರೆ, ಅನಿಮೇಶನ್&ಮಲ್ಟಿಮೀಡಿಯಾ ವಿಭಾಗದ ಬೋಧನಾ ಸಹಾಯಕರಾದ ರಂಗನಾಥ ಕುಲಕರ್ಣಿ, ಅರುಣ್ .ಆರ್ ಮೊದಲಾದವರು ಉಪಸ್ಥಿತರಿದ್ದರು.ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಯು.ಎಸ್. ಮಹಾಬಲೇಶ್ವರ್ ಈ ರೀತಿಯ ಪ್ರದರ್ಶನ ಪ್ರತಿಭಾ ವಿಕಾಸಕ್ಕೆ ಪೂರಕ .ಕಲಾವಿದರಿಗೆ ಹಾಗೂ ಗಣಿತ ಕ್ಷೇತ್ರದವರಿಗೆ ಅಕ್ಕ ತಂಗಿ ಮಕ್ಕಳ  ರೀತಿಯಲ್ಲಿ ಸಂಬಂಧ ಇದೆ. ಗಣಿತದವರೂ ಸಹ ಸಂಖ್ಯೆ ಇರಿಸಿಕೊಂಡು ಏನೇನೋ ಕಲ್ಪನೆ ಕಾಣುತ್ತಾರೆ, ಸೂತ್ರ ಕಂಡು ಕೊಳ್ಳುತ್ತಾರೆ ಹಾಗೆಯೇ ಕಲಾವಿದರು ಕೂಡಾ ಅನೇಕ ಬಗೆಗಳಿಂದ ಪ್ರೇರಣೆಗೊಂಡು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾರೆ,ಅನನ್ಯವಾಗಿ ಅಭಿವ್ಯಕ್ತಿಸುತ್ತಾರೆ. ಹೊರನೋಟಕ್ಕೆ ಕಲಾವಿದರು ಒರಟಾಗಿ ಕಂಡರೂ ಅಂತರಂಗದಲ್ಲಿ. ತುಂಬಾ ಭಾವುಕರಾಗಿರುತ್ತಾರೆ.ದಾ ವಿ ವಿಯ ಸಹಕಾರ ಈ ಕಾಲೇಜಿನ ವಿದ್ಯಾರ್ಥಿಗಳ ಪ್ರದರ್ಶನಗಳಿಗೆ ಸದಾ ಇದ್ದೇ ಇರುತ್ತದೆ ಎಂದು ನುಡಿದರು.ರಂಗಕರ್ಮಿ   ಬಾ ಮ ಬಸವರಾಜಯ್ಯ ಮಾತನಾಡಿ  ಇಂದು ವಿಶ್ವ ವಿಖ್ಯಾತ ಕಲಾಕಾರ ಲಿಯೋನಾರ್ಡೋ ಡ ವಿಂಚಿಯ ಜನ್ಮ ದಿನ.ವಿಶ್ವ ಕಲಾ ದಿನ.ಈ ದಿನ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅರ್ಥ ಪೂರ್ಣ. ಚಿತ್ರ ಕಲೆ,ಶಿಲ್ಪ ,ಸಾಹಿತ್ಯ, ಸಂಗೀತ, ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿವೆ.ಸಾಹಿತಿಯ ಸಾಹಿತ್ಯ ಕೃತಿ ಜನರ ಗಮನ ಸೆಳೆಯಲು ಅದರ ಮುಖಪುಟ ಆಕರ್ಷಕ ಆಗಿರುವುದು ಮುಖ್ಯ .ಕಲಾವಿದರು ಮಾಡಿಕೊಡುವ ಮುಖಪುಟ ಚಿತ್ರ ಬಹಳ ಮಹತ್ವ ಎಂದು ನುಡಿದರಲ್ಲದೆ ,ಇತ್ತೀಚಿನ ವರ್ಷಗಳಲ್ಲಿ ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯ ಈ ರೀತಿ ಔಚಿತ್ಯ ಪೂರ್ಣ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಹೆಚ್ಚು ಪರಿಚಿತವಾಗುತ್ತಿರುವುದು ಸಂತಸದ ಸಂಗತಿ. ಈ ಮಹಾವಿದ್ಯಾಲಯ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.