ಹಂಪಿ ಉತ್ಸವದಂತೆ ಮುಂದಿನ ದಿನಗಳಲ್ಲಿ ಚಿತ್ರದುರ್ಗ ಉತ್ಸವ

ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಏ.16: ಹಂಪಿ ಉತ್ಸವದಂತೆ ಮುಂದಿನ ದಿನಗಳಲ್ಲಿ ಚಿತ್ರದುರ್ಗ ಉತ್ಸವ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.ಚಿತ್ರದುರ್ಗದ ಎಸ್ ಜಿ ಸಮುಧಾಯ ಭವನದಲ್ಲಿ ಮಂಗಳವಾರ ಎನ್ ಡಿ ಎ ಬೆಂಬಲಿತ ವೀರಶೈವ ಸಮಾಜದ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರಳ ಸಜ್ಜನಿಕೆಯ ವ್ಯಕ್ತಿ ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿದರೆ ನನ್ನನ್ನೆ ಗೆಲ್ಲಿಸಿದಂತೆ ಎಂದು ಹೇಳಿದ ಯಡಿಯೂರಪ್ಪ, ಕೇಂದ್ರ ಸರ್ಕಾರ ಭದ್ರ ಯೋಜನೆಗೆ 5300 ಕೋಟಿ ರೂ. ಹಣ ಕೊಡುವುದಾಗಿ ಹೇಳಿದ್ದು, ಮೋದಿ ಹಾಗೂ ಅಮಿತ್ ಷಾ ಅವರ ಮನವೊಲಿಸಿ ಹಣ ಬಿಡುಗಡೆ ಶೀಘ್ರವೇ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.ನನಗೀಗ 82 ವರ್ಷ. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ನೋಡಬೇಕು ಎಂದು ದೇವರು ನನಗೆ ಶಕ್ತಿ ಕೊಟ್ಟಿದ್ದಾರೆ. ಅದ್ದರಿಂದ ನಾನು ರಾಜ್ಯದೆಲ್ಲೇಡೆ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು. ಎಲ್ಲೇಡೆ ವಾತಾವರಣ ಮೋದಿ ಪರವಾಗಿದ್ದು, ಉತ್ತಮ ಬೆಂಬಲ ಇದೆ. ಕನಿಷ್ಟ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೋವಿಂದ ಕಾರಜೋಳ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.ಕಾಂಗ್ರೇಸ್ ಮುಳುಗುತ್ತಿರುವ ಹಡಗು, ನಿಮ್ಮ ಮುಂದಿನ ಪ್ರಧಾನಿ ಯಾರು ಹೇಳಿ‌ ನೋಡೊಣ ಎಂದು ಪ್ರಶ್ನಿಸಿದ ಅವರು, ಮೋದಿ ಮುಂದೆ ಕಾಂಗ್ರೇಸ್ ಪಕ್ಷದ ಎಲ್ಲರೂ ನೆಲಕಚ್ಚಿದ್ದಾರೆ. ರೈತರಿಗಾಗಿ ಕೇಂದ್ರ ಸರ್ಕಾರ 6 ಸಾವಿರ ಹಣ  ಕೊಡುತ್ತಿದೆ. ನಾನು‌ ಕೂಡ 4 ಸಾವಿರ ಹಣ ಕೊಡುತ್ತಿದ್ದೆ.  ಅದನ್ನು‌ ಸಿದ್ದರಾಮಯ್ಯ ನಿಲ್ಲಿಸಿದ್ದಾರೆ. ರೈತರ ಶಾಪ ನಿಮ್ಮನ್ನು ಸುಡಲಿದೆ ಎಂದು ಕಿಡಿಕಾರಿದರು.ಬಿಜೆಪಿ-ಜೆಡಿಎಸ್ ಹೊಂದಾಣಿಕೆಯನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ. ಹಾಲು ಜೇನಿನ ರೀತಿ ಮುಂದಿನ ದಿನಗಳಲ್ಲಿ ನಾವು ಕೆಲಸ ಮಾಡಲಿದ್ದೆವೆ. ಚುನಾವಣೆ ಮುಗಿಯುವ ವರೆಗೂ ಮನೆ ಮನೆಗೆ ತೆರಳಿ ಗೋವಿಂದ ಕಾರಜೋಳ ಪರವಾಗಿ ಮತ ಕೇಳಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.ಲೋಕಸಭಾ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಕಳೆದ 20 ವರ್ಷಗಳಿಂದ ಯಡಿಯೂರಪ್ಪ ನನ್ನನ್ನು ಸಹೋದರನಂತೆ ನೋಡಿಕೊಂಡು ಬಂದಿದ್ದಾರೆ. ದೇಶದ ಜನ ಸ್ವಾತಂತ್ರ್ಯ ಬಂದು  60 ವರ್ಷಗಳ ಕಾಲ ಕಾಂಗ್ರೇಸ್ ನ ದುರಾಡಳಿತಕ್ಕೆ ತುತ್ತಾಗಿದ್ದರು. ಆದರೆ ನಂತರ ಮೋದಿಜೀ ಅವರು ಅಧಿಕಾರಕ್ಕೆ ಬಂದು ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದ ರೀತಿಯಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಆದ್ದರಿಂದ ದೇಶದ ಜನರು ಈಗ ಮತ್ತೋಮ್ಮೆ 3 ನೇ ಭಾರೀ ಪ್ರಧಾನಿ ಮಾಡಬೇಕೆಂದು ಕಾತುರತೆಯಲ್ಲಿ ಇದ್ದಾರೆ. ಯಾವ ಜನ್ಮದ ಋಣಾನುಬಂಧವೋ ಗೊತ್ತಿಲ್ಲ. ಬಸವಣ್ಣ ನವರ ಮಾಡಲ್ಲಿ‌ ಜನಿಸಿ ದುರ್ಗಕ್ಕೆ ಬಂದು ಜನ ಸೇವೆ ಮಾಡಲು ಕರೆಸಿ ಕೊಂಡಿದ್ದಾರೆ. ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.ಮಾಜಿ ಸಚಿವ ಮುರುಘೇಶ್ ನಿರಾಣಿ ಮಾತನಾಡಿ, ಕಾರಜೋಳ ಅವರು ಬಸವಣ್ಣನವರ ಅಭಿಮಾನಿಯಾಗಿದ್ದು, ಅವರ ಆದರ್ಶ, ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ವ್ಯಕ್ತಿ. ಉತ್ತರ ಕರ್ನಾಟಕದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಾ  ಜನರ ಮನ್ನಣೆ ಗಳಿಸಿರುವ ವ್ಯಕ್ತಿಯಾಗಿದ್ದಾರೆ. ಇದೀಗ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಅವರಿಗೆ ಹೆಚ್ಚಿನ ಮತಗಳನ್ನು ಹಾಕುವ ಮೂಲಕ ಜಯಶೀಲರನ್ನಾಗಿ ಮಾಡಿ, ಜಿಲ್ಲೆಯ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.ನವೀನ್,  ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ಎಸ್.ಕೆ.ಬಸವರಾಜನ್, ಲಿಂಗಮೂರ್ತಿ, ಮುರುಳಿ, ಕುಮಾರಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.