ವೀರಶೈವ-ಲಿಂಗಾಯತ ಮಹಾಸಭಾಗೆ ಐದು ಎಕರೆ ಜಮೀನಿಗೆ ಒತ್ತಾಯ: ಸಿಎಂ ಸಕಾರಾತ್ಮಕ ಸ್ಪಂದನೆ
ಕಲಬುರಗಿ:ಸೆ.20- ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾಗೆ ಕಲಬುರಗಿ ಹೊರವಲಯದ ಅಫಜಲಪುರ ರಸ್ತೆಯ ಶರಣಸಿರಸಗಿ ಬಳಿ ಐದು ಎಕರೆ ಸರಕಾರಿ ಜಮೀನು ನೀಡಬೇಕೆಂದು ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಅಫಜಲಪುರ ಶಾಸಕ ಎಂ.ವೈ.ಪಾಟೀಲ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಲ್ಲಾ ಪಂಚಾಯಿತಿ ಮಾಜಿ ಪ್ರತಿಪಕ್ಷ ನಾಯಕ ಶಿವಾನಂದ ಪಾಟೀಲ್ ಮರತೂರ ಹಾಗೂ ಹಿರಿಯ ಮುಖಂಡ ರಾಜಶೇಖರ ಸೀರಿ ಸೇರಿದಂತೆ ಇನ್ನಿತರ ಮುಖಂಡರನ್ನು ಒಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಮನವಿ ಪತ್ರ ಸಲ್ಲಿಸಿದರು.
ಅಫಜಲಪುರ ರಸ್ತೆಯ ಶರಣಸಿರಸಗಿ ಸಮೀಪದ ಸರ್ವೆ ನಂಬರ್ 243ರಲ್ಲಿ ಒಟ್ಟು 29 ಎಕರೆ 21 ಗುಂಟೆ ಜಮೀನು ಲಭ್ಯವಿದೆ. ಮತ್ತೊಂದೆಡೆ, ಸರ್ವೆ ನಂಬರ್ 245/2ರಲ್ಲಿ ಒಟ್ಟು 16 ಎಕರೆ ಲಭ್ಯವಿದೆ. ಈ ಉಭಯ ಸರ್ವೆ ನಂಬರ್ ಪೈಕಿ ಯಾವುದಾದರೂ ಒಂದರಲ್ಲಿ ಪ್ರತ್ಯೇಕವಾಗಿ ಐದು ಎಕರೆ ಜಮೀನು ಒದಗಿಸಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದರು.
ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯ ಸ್ಥಾಪಿಸುವುದು, ಉಚಿತವಾಗಿ ಕೋಚಿಂಗ್ ಸೆಂಟರ್ ನಡೆಸುವುದು, ಕ್ರೀಡಾ ಅಕಾಡೆಮಿ ಆರಂಭಿಸುವ ಮಹದುದ್ದೇಶ ಇರುವುದರಿಂದ ಈ ಸದಾಶಯಕ್ಕೆ ಪೂರಕವಾಗಿ ಐದು ಎಕರೆ ಜಮೀನು ಒದಗಿಸಿದರೆ ಕಲಬುರಗಿ ಜಿಲ್ಲೆಯಾದ್ಯಂತ ಇರುವ ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದು ನಿಯೋಗದಲ್ಲಿದ್ದ ಗಣ್ಯರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಈ ವೇಳೆ, ವೀರಶೈವ-ಲಿಂಗಾಯತ ಸಮುದಾಯದ ಮುಖಂಡರ ಬೇಡಿಕೆಗೆ ದನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಈ ನಿಟ್ಟಿನಲ್ಲಿ ತಾವು ಅಗತ್ಯ ಮೇಲುಸ್ತುವಾರಿ ವಹಿಸುವುದಾಗಿ ಭರವಸೆ ನೀಡಿದರು.
ಮನವಿ ಪತ್ರ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೂಲಕ ಕೂಡಲೆ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳದಲ್ಲೇ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಮುಖಂಡರು, ವೀರಶೈವ-ಲಿಂಗಾಯತ ಸಮುದಾಯದ ಮುಂಚೂಣಿ ನಾಯಕರು, ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.