ಕಾಫಿ ಕುಡಿದು ಮಲಗಿದ ದ್ವಾರಕೀಶ್ ಎದ್ದೇಳಲಿಲ್ಲಸಿಎಂ ಸೇರಿ ಗಣ್ಯರ ಕಂಬನಿ
ಬೆಂಗಳೂರು,ಏ.೧೬- ಬೆಳಗ್ಗೆ ಲೂಸ್ ಮೋಷನ್ ಆಗಿತ್ತು. ಆ ನಂತರ ಕಾಫಿ ಕುಡಿದು ಮಲಗಿದ್ದರು ಎದ್ದೇಳಲಿಲ್ಲ ಎಂದು ದ್ವಾರಕೀಶ್ ಅವರ ಅವರ ಪುತ್ರ ಯೋಗೇಶ್ ಹೇಳಿದ್ದಾರೆ.
ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಮನೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದರು ಎಂದು ತಿಳಿಸಿದ್ದಾರೆ.
ಹಿರಿಯ ನಟ ನಿರ್ಮಾಪಕ ದ್ವಾರಕೀಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ರಾಜಕೀಯ ನಾಯಕರು, ಸಚಿವರು ತೀವ್ರ ಸಂತಾಪ ಸೂಚಿಸಿದ್ದಾರೆ.
ನೋಡುಗರ ಮನದಲ್ಲಿ ಛಾಪು
ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ದುಃಖದ ಸಂಗತಿ,ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಛಾಪು ಮೂಡಿಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.
ದುಃಖದ ಸಂಗತಿ: ದೊಡ್ಡಣ್ಣ
ಕನ್ನಡ ಚಿತ್ರರಂಗದ ಧೀಮಂತ ವ್ಯಕ್ತಿಗಳಲ್ಲಿ ದ್ವಾರಕೀಶ್ ಒಬ್ಬರು, ಸಿದ್ದಲಿಂಗಯ್ಯ ಭಾರ್ಗವರಂತಹ ಘಟಾನುಘಟಿ ನಿರ್ದೇಶಕರ ಸಾಲಿನಲ್ಲಿ ನಿಂತಿದ್ದರು. ಈ ಮೂಲಕ ಕನ್ನಡ ಚಿತ್ರರಂಗವನ್ನು ಆ ಕಾಲದಲ್ಲಿಯೇ ವಿದೇಶದಲ್ಲಿ ಚಿತ್ರೀಕರಣ ಮಾಡುವ ಮೂಲಕ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದರು, ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಜೊತೆ ನಟನೆ ಮಾಡಿದ್ದು ನನ್ನ ಪುಣ್ಯ ನನ್ನ ಪೂರ್ವ ಜನ್ಮದ ಸುಕೃತ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.a
ನೆನಪು ಬಿಟ್ಟು ಹೋಗಿದ್ದಾರೆ: ಜಗ್ಗೇಶ್
ದ್ವಾರಕೀಶ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ, ಸದಾ ನಾನು ಅವರನ್ನು ದೇವರ ರೀತಿ ನೋಡುತ್ತಿದ್ದೆ. ಸಂಕಷ್ಟದ ದಿನಗಳಲ್ಲಿ ನನ್ನನ್ನು ಕೈ ಹಿಡಿದು ನಡೆಸಿದ್ದರು ಕೃಷ್ಣ ನೀ ಕುಣಿದಾಗ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ಚಿತ್ರಕ್ಕೆ ಎಲ್ಲರೂ ರಿಜೆಕ್ಟ್ ಮಾಡಿದ್ದರು. ದ್ವಾರಕೀಶ್ ಅವರು ನೋಡಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ಏನೋ ರಜನಿಕಾಂತ್ ಇದ್ದಂತೆ ಇದ್ದಾನೆ ಅವಕಾಶ ಮಾಡಿಕೊಡಿ ಎಂದಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ ಹಿರಿಯ ನಟ ಜಗ್ಗೇಶ್.
ಜಗ್ಗೇಶ್ ಕಲಾವಿದನಾಗಿ ಗುರುತಿಸಿಕೊಳ್ಳಲು ದ್ವಾರಕೀಶ್ ಕಾರಣ. ನನ್ನಂತಹ ಅನೇಕ ಕಲಾವಿದರನ್ನು ಚಿತ್ರರಂಗದಲ್ಲಿ ಪರಿಚಯ ಮಾಡಿದ್ದರು.ಅವರ ನಿರ್ಮಾಣದ ಸಂಸ್ಥೆಯಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದರು ಕಾರಣಾಂತರದಿಂದ ಚಿತ್ರ ಮಾಡಲು ಸಾಧ್ಯವಾಗಿರಲಲ್ಲ. ವಿಷ್ಣುವರ್ಧನ್ ಜೊತೆ ಮುನಿಸಿಕೊಂಡಿದ್ದರು. ಅದನ್ನು ಸರಿ ಮಾಡಲು ಆಗ ರಾಯರು ಬಂದರು ಮಾವನ ಮನಗೆ ಚಿತ್ರ ಮಾಡಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ
ಉತ್ತಮ ಕಲಾವಿದ: ಗಿರಿಜಾ ಲೋಕೇಶ್
ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಲಾವಿದ, ನಿರ್ಮಾಪಕ, ನಿರ್ದೇಶಕ ತುಂಬು ಕುಟುಂಬದಲ್ಲಿ ಬೆಳೆದು ಬಂದಿದ್ದರು. ಹೀಗಾಗಿಯೇ ನಾಡಿನ ಸಂದೇಶ ನೀಡುವ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸಣ್ಣ ಪುಟ್ಟ ಕಲಾವಿದರು ಎನ್ನದೆ ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಕಂಬನಿ ಮಿಡಿದಿದ್ದಾರೆ.
ಸದಾ ಚಿರಾಯು:
ಕನ್ನಡಕ್ಕೆ,ಕನ್ನಡ ಚಿತ್ರರಂಗಕ್ಕೆ ನಿಮ್ಮ ಸೇವೆ ಅಪಾರ,ನಮ್ಮ ಬಾಲ್ಯ ಸಿನಿಬದುಕು ಚೆಂದವಾಗಿರಲು ನಿಮ್ಮ ಸಿನಿಮಾಗಳು ಕಾರಣ.ಕನ್ನಡ ಚಿತ್ರರಂಗದ ಶ್ರೀಮಂತಿಕೆಗೆ ನೀವು ಬಹು ಕಾರಣ ಅಂತಿಮ ನಮನಗಳು ಸರ್ ಹೋಗಿ ಬನ್ನಿ ನಿಮ್ಮ ಹೆಜ್ಜೆ ಗುರುತುಗಳು ಸದಾ ಚಿರಾಯು ಎಂದು ನಟ ನೀನಾಸಂ ಸತೀಶ್ ಕಂಬನಿ ಮಿಡಿದ್ದಾರೆ.
ಎಚ್‌ಡಿಕೆ ಕಂಬನಿ
ಕನ್ನಡದ ಹಿರಿಯ ನಟ ಬದ್ವಾರಕೀಶ್ ಅವರ ಅಗಲಿಕೆ ನನಗೆ ಬಹಳ ನೋವುಂಟು ಮಾಡಿದೆ. ಕಲಾವಿದರಾಗಿ ಅಷ್ಟೇ ಅಲ್ಲದೆ; ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಅನುಪಮ ಸೇವೆ ಆವಿಸ್ಮರಣೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಕಂಬನಿ ಮಿಡಿದ್ದಾರೆ.
ವರನಟ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್‌ರಂಥ ದಿಗ್ಗಜರ ಜತೆ ನಟಿಸಿದ್ದ ಅವರು, ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಿನಿಮಾ ಅಸ್ತಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದಿದ್ದಾರೆ.
ದ್ವಾರಕೀಶ್ ನಿಧನಕ್ಕೆ ಕೃಷಿ ಸಚಿವರ ಸಂತಾಪ.
ಕನ್ನಡ ಚಿತ್ರ ರಂಗದ ಜನಪ್ರಿಯ ನಟ , ನಿರ್ದೇಶಕ ,ನಿರ್ಮಾಪಕ ದ್ವಾರಕೀಶ್ ಅವರ ನಿಧನಕ್ಕೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ದ್ವಾರಕೀಶ್ ಅವರು ಚಂದನವನದ ಅತ್ಯಂತ ಪ್ರತಿಭಾವಂತ ನಟ , ನಿರ್ಮಪಕ, ನಿರ್ದೇಶಕ, ಚಿತ್ರ ಸಾಹಿತಿ, ಕನ್ನಡದ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ ಅವರ ಅಗಲಿಕೆಯಿಂದ ಕನ್ನಡ ಚಲನ ಚಿತ್ರರಂಗದ ಧೃವತಾರೆಯೊಂದು ಮರೆಯಾದಂತಾಗಿದೆ ಎಂದು ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ವಿಜಯೇಂದ್ರ ಸಂತಾಪ
ಕನ್ನಡ ಸಿನಿಮಾರಂಗದ ಹಿರಿಯ ನಟ ದ್ವಾರಕೀಶ್ ಅರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ‘ದ್ವಾರಕೀಶ್ ಚಿತ್ರ’ ಬ್ಯಾನರ್ ಅಡಿಯಲ್ಲಿ ೪೦ ಕ್ಕೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಿಸಿದ್ದರು. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಅವರ ಕುಟುಂಬಸ್ಥರು ಬಂಧುಮಿತ್ರರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.ಬೊಮ್ಮಾಯಿ ಕಂಬನಿಕನ್ನಡ ಚಿತ್ರರಂಗದ ನಟ, ನಿರ್ಮಾಪಕ ದ್ವಾರಕೀಶ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ನಾಡಿಗೆ ದೊಡ್ಡ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದ್ವಾರಕೀಶ್ ಅವರು ಸಿನೆಮಾ ರಂಗದಲ್ಲಿ ಹೊಸತನ ತಂದವರು, ಕಲೆಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಬದುಕಿನಲ್ಲಿ ಏನೇ ಕಷ್ಟ ಇದ್ದರೂ ಜನರನ್ನು ನಗಿಸುವ ಕೆಲಸ ಮಾಡಿದ್ದಾರೆ ಎಂದರು.