ಸಂವಿಧಾನ ಆಶಯಗಳನ್ನು ಸಾಕಾರಗೊಳಿಸಿ: ಮಹೇಶ್
ಗೌರಿಬಿದನೂರು.ಏ೧೬: ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜಯಂತಿಯನ್ನು ತಾಲ್ಲೂಕು ಆಡಳಿತ ಸರಳವಾಗಿ ಆಚರಣೆ ಮಾಡಲಾಯಿತು.
ತಹಸೀಲ್ದಾರ್ ಎಸ್. ಮಹೇಶ್ ಪತ್ರಿ ಮಾತನಾಡಿ, ಈ ಬಾರಿ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸರಳವಾಗಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಗಿದೆ. ಈ ದೇಶಕ್ಕೆ ಬಹು ದೊಡ್ಡ ಸಂವಿಧಾನ ರಚಿಸಿದ ಕೀರ್ತಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ೧೯೪೭ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮದೆ ಆದ ಒಂದು ಸಂವಿಧಾನ ಅಗತ್ಯ ಇತ್ತು. ಆಗ ನಮ್ಮ ದೇಶದ ಗಣ್ಯರಾದ ಬಾಬು ರಾಜೇಂದ್ರ ಪ್ರಸಾದ್, ಮಹಾತ್ಮಗಾಂಧಿ ಅವರು ಸಂವಿಧಾನ ರಚನೆಗೆ ಒಂದು ಕರಡು ಸಮಿತಿ ರಚಿಸಿ ಅದಕ್ಕೆ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಅವರೊಟ್ಟಿಗೆ ಏಳು ಜನರ ಸಮಿತಿ ಸದಸ್ಯರನ್ನು ನೇಮಕ ಮಾಡಿದರು. ಕಾರಣಾಂತರಗಳಿಂದ ಏಳು ಜನರು ವಿದೇಶಗಳ ವಾಸ, ಕೆಲವರಿಗೆ ಅನಾರೋಗ್ಯದ ಕಾರಣದಿಂದ ಅವರು ಸಂವಿಧಾನ ರಚನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಅಂಬೇಡ್ಕರ್ ಮಾತ್ರ ಎರಡು ವರ್ಷಗಳು ಸತತವಾಗಿ ಶ್ರಮಿಸಿ ಸಂವಿಧಾನ ರಚಿಸಿದರು. ಇದರಲ್ಲಿ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಮಾನತೆ ನೀಡಿದರು. ಎಲ್ಲರಿಗೂ ಹಕ್ಕುಗಳ ನಿರ್ವಹಣೆ, ಸಾಮಾಜಿಕ ಭದ್ರತೆ, ರಾಜ್ಯಾಂಗ, ಶಾಸಕಾಂಗಗಳ ಕೆಲಸಗಳ ನಿರ್ವಹಣೆಗಳ ಬಗ್ಗೆ ಸಂಪೂರ್ಣ ಕರ್ತವ್ಯಗಳ ಬಗ್ಗೆ ಸಂವಿಧಾನದಲ್ಲಿ ಅಳವಡಿಸಿದೆ. ಮಾನವ ಹಕ್ಕುಗಳ ಮಹಿಳಾ ಹಕ್ಕು ಆಯೋಗಗಳು ರಚನೆ ಮಾಡಿ ಪ್ರತಿ ಹಂತದಲ್ಲಿ ಮಾನವ ಹಕ್ಕುಗಳ ಚ್ಯುತಿ ಬಾರದಂತೆ ರಚಿಸಿದರು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಆಶಯಗಳನ್ನು ನಾವು ಸಾಕಾರಗೊಳಿಸಿದಾಗ ಮಾತ್ರ ಸಂವಿಧಾನಕ್ಕೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ತಾ.ಪಂ ಇಒ ಜಿ.ಕೆ.ಹೊನ್ನಯ್ಯ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸುಭದ್ರಗೊಳಿಸುವ ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ರವರ ಕೊಡುಗೆ ಅಪಾರವಾಗಿದೆ. ಸಂವಿಧಾನಕ್ಕೆ ಗೌರವ ಸಲ್ಲಿಸುವ ಮೂಲಕ ಅವರ ಆಶಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಈ ವೇಳೆ ಬಿಇಓ ಕೆ.ವಿ.ಶ್ರೀನಿವಾಸಮೂರ್ತಿ, ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಸಿಪಿಐ ಕೆ.ಪಿ.ಸತ್ಯನಾರಾಯಣ್ ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್ ೧ ಸಹಾಯಕ ನಿರ್ದೇಶಕರಾದ ಚೆನ್ನಪ್ಪಗೌಡ ನಾಯ್ಕರ್, ವ್ಯವಸ್ಥಾಪಕ ಅಂಜಿನಪ್ಪ, ಮುಖಂಡರಾದ ಬಾಲಪ್ಪ, ಬಾಲಕೃಷ್ಣ, ಬಿ.ಕೆ.ನರಸಿಂಹಮೂರ್ತಿ, ಜೆ.ಕೆ.ಗಂಗಧಾರ್, ಎಚ್.ಎಲ್.ವೆಂಕಟೇಶ್, ಕೆ.ನಂಜುಂಡಪ್ಪ, ಅಶ್ವತ್ತಪ್ಪ, ಗಂಗಾಧರ್, ಗಂಗಾಧರಪ್ಪ, ಮುನಿಯಪ್ಪ, ಗೋಪಿ, ಕೃಷ್ಣಪ್ಪ, ಸುದರ್ಶನ್, ವೈ.ಟಿ.ಪ್ರಸನ್ನಕುಮಾರ್ ಸೇರಿದಂತೆ ಇತರರು ಹಾಜರಿದ್ದರು.