ರಾಮನವಮಿ ನಿಮಿತ್ಯ ಭವ್ಯ ಶೋಭಾಯಾತ್ರೆ: ಮುಸ್ಲಿಂ ಭಕ್ತರಿಂದ ತಂಪು ಪಾನೀಯ, ಮಜ್ಜಿಗೆ ವಿತರಣೆ
ಕಲಬುರಗಿ:ಏ.15: ನಗರದಲ್ಲಿ ಶ್ರೀರಾಮ್ ನವಮಿ ನಿಮಿತ್ಯ ಏಪ್ರಿಲ್ 17ರಂದು ಬೆಳಿಗ್ಗೆ 10-30ಕ್ಕೆ ರಾಮತೀರ್ಥದಿಂದ ಶ್ರೀರಾಮನ 15 ಅಡಿ ಎತ್ತರದ ಮೂರ್ತಿಯ ಭವ್ಯ ಶೋಭಾಯಾತ್ರೆಯು ಜಗತ್ ವೃತ್ತದವರೆಗೆ ಜರುಗಲಿದೆ ಎಂದು ಅಪ್ಪಾರಾವ್ ಮುತ್ಯಾ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಜನರು ಹಾಗೂ ಹಲವಾರು ಮಠಾಧೀಶರು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದರು.
ನ್ಯಾಯವಾದಿ ಚಂದ್ರಕಾಂತ್ ಆರ್. ಕಾಳಗಿ ಅವರು ಮಾತನಾಡಿ, ಇಂತಹ ಶೋಭಾಯಾತ್ರೆ ಹತ್ತನೇ ವರ್ಷದಲ್ಲಿ ಮುನ್ನಡೆಯಲಿದೆ. ಶೋಭಾ ಯಾತ್ರೆಗೆ ಆಂದೋಲಾದ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಚಾಲನೆ ನೀಡುವರು. ಸಾನಿಧ್ಯವನ್ನು ಸರಡಗಿಯ ಶಕ್ತಿ ಪೀಠದ ಅಪ್ಪಾರಾವ್ ಮುತ್ಯಾ ಅವರು ವಹಿಸುವರು. ಸಾವಿರಾರು ಸಂಖ್ಯೆಯಲ್ಲಿನ ರಾಮ ಭಕ್ತರು ಅಲ್ಲಿಂದ ಮೆರವಣಿಗೆ ಆರಂಭಿಸಿ ಖಾದ್ರಿ ಚೌಕ್ ಮೂಲಕ ಆಳಂದ್ ನಾಕಾ, ಚೌಕ್ ಪೋಲಿಸ್ ಠಾಣೆ ವೃತ್ತದ ಮೂಲಕ ಜಗತ್ ವೃತ್ತಕ್ಕೆ ಬಂದು ತಲುಪಲಿದೆ. ಸಂಜೆ 5 ಗಂಟೆಯವರೆಗೆ ಮೆರವಣಿಗೆ ಜರುಗಲಿದೆ ಎಂದರು.
ಭವ್ಯ ಶೋಭಾ ಯಾತ್ರೆಯಲ್ಲಿ ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಮಾಶಾಳ್‍ದ ಕೇದಾರ್ ಶ್ರೀಗಳು, ಶಹಾಪುರದ ಮಲ್ಲಿಕಾರ್ಜುನ್ ಮುತ್ಯಾ, ನೀಲೂರ್ ಶ್ರೀಗಳು, ಪಾಳಾದ ಶ್ರೀಗಳು, ಗದ್ದುಗೆಮಠದ ಶ್ರೀಗಳು ಮುಂತಾದ ಮಠಾಧೀಶರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು.
ಮೆರವಣಿಗೆಯುದ್ದಕ್ಕೂ ರಾಮ ಭಕ್ತರಿಗೆ ತಂಪು ಪಾನೀಯ, ಮಜ್ಜಿಗೆ, ದಾಸೋಹ ವ್ಯವಸ್ಥೆ ಮಾಡಲಾಗಿದೆ. ಖಾದ್ರಿ ಚೌಕ್‍ನಲ್ಲಿ ಮುಸ್ಲಿಂ ಬಾಂಧವರು ರಾಮ ಭಕ್ತರಿಗೆ ತಂಪು ಪಾನೀಯದೊಂದಿಗೆ ಮಜ್ಜಿಗೆಯನ್ನೂ ಸಹ ವಿತರಿಸುವ ಮೂಲಕ ಸೌಹಾರ್ದ ಪರಂಪರೆಯನ್ನು ಪ್ರತಿ ವರ್ಷದ ರಾಮನವಮಿ ಸಂದರ್ಭದಲ್ಲಿ ಮಾಡುತ್ತಿದ್ದು, ಈ ಬಾರಿಯೂ ಸಹ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಅವರು ತಿಳಿಸಿದರು.
ಶೋಭಾಯಾತ್ರೆಯು ಅತ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ಜರುಗಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಹೇಶ್ ಗೊಬ್ಬೂರ್, ಶರಣು ಗುತ್ತೇದಾರ್, ದತ್ತು ಸುಗಂಧಿ, ಮಹೇಶ್ ಯಾದವ್, ತಾತಾಗೌಡರು ಮುಂತಾದವರು ಉಪಸ್ಥಿತರಿದ್ದರು.