ಏ. 17ರಂದು ಶ್ರೀರಾಮ ನವಮಿ ನಿಮಿತ್ಯ ಭವ್ಯ ಶೋಭಾಯಾತ್ರೆ
ಕಲಬುರಗಿ:ಏ.15: ನಗರದಲ್ಲಿ ಶ್ರೀರಾಮ್ ನವಮಿ ನಿಮಿತ್ಯ ಏಪ್ರಿಲ್ 17ರಂದು ಶ್ರೀರಾಮನ 15 ಅಡಿ ಎತ್ತರದ ಮೂರ್ತಿಯ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಮ ನವಮಿ ಉತ್ಸವ ಸಮಿತಿಯ ಅಧ್ಯಕ್ಷ ರಾಜು ಭವಾನಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷಗಳಿಂದ ಶ್ರೀರಾಮ ನವಮಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದ್ದು, ಈ ಬಾರಿ ಹತ್ತನೇ ಶ್ರೀರಾಮ್ ನವಮಿ ಉತ್ಸವವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಕೋಟ್ಯಾಂತರ ಹಿಂದೂಗಳ ಕನಸು ಶ್ರೀ ರಾಮ ಮಂದಿರ ನಿರ್ಮಾಣ ಇದೀಗ ಸಾಕಾರಗೊಂಡಿದೆ. ಆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಶ್ರೀರಾಮ ನವಮಿ ಅತ್ಯಂತ ವಿಶೇಷ ಹಾಗೂ ಮಹತ್ವ ಕೊಟ್ಟು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಸಕ್ತ ವರ್ಷವೂ ವಾದ್ಯ ಮೇಳ, ಸಾಂಸ್ಕøತಿಕ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಮೆರವಣಿಗೆಯಲ್ಲಿ ಕಾಲಿ ಚರಣ ಮಹಾರಾಜರು, ತುಳಜಾಪುರದ ಮಠಾಧಿಪತಿ ಮಹಾಂತ ತುಕ್ಕೋಜಿ ಭುವ್ವಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾನಿಧ್ಯ ವಹಿಸುವರು ಎಂದು ಅವರು ತಿಳಿಸಿದರು.
ನಗರದ ನೆಹರು ಗಂಜ್, ಶ್ರೀ ನಗರೇಶ್ವರ್ ಶಾಲೆಯಿಂದ ಏಪ್ರಿಲ್ 17ರಂದು ಮಧ್ಯಾಹ್ನ 12 ಗಂಟೆಗೆ ಭವ್ಯ ಮೆರವಣಿಗೆ ಆರಂಭವಾಗಲಿದೆ. ಜಗತ್ ವೃತ್ತದವರೆಗೆ ಮೆರವಣಿಗೆ ಸಾಗಲಿದೆ. ಮಾರ್ಗ ಮಧ್ಯೆ ವಿವಿಧ ಸಂಘ, ಸಂಸ್ಥೆಗಳವರು ನೀರು, ಮಜ್ಜಿಗೆ, ದಾಸೋಹ ವ್ಯವಸ್ಥೆ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರಾಮ ಭಕ್ತರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದೀಪಕ್ ಬಲ್ಲವಾ, ಲಕ್ಷ್ಮೀಕಾಂತ್ ಸ್ವಾದಿ, ದಯಾನಂದ್ ಪಾಟೀಲ್, ಶ್ರೀಧರ್ ನಾಗನಳ್ಳಿ, ಶ್ರೀಧರ್ ಸಲಗರ್, ಸಿದ್ದು ಕಂದಗಲ್ ಮುಂತಾದವರು ಉಪಸ್ಥಿತರಿದ್ದರು.