ಹೆಡಗಾಪೂರದಲ್ಲಿ ಗುರುವಂದನಾ ಕಾರ್ಯಕ್ರಮ:ವೀರಶೈವ, ಲಿಂಗಾಯತ ಒಂದೇ ಭಿನ್ನಾಭಿಪ್ರಾಯ ಬೇಡ: ನಾಡೋಜ ಡಾ. ಅನ್ನದಾನೇಶ್ವರ
ಔರಾದ್ :ಏ.15: ವೀರಶೈವ ಲಿಂಗಾಯತ ಎರಡು ಒಂದೇ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಇಲ್ಲಿ ಆಚಾರ ವಿಚಾರ ಸಂಪ್ರದಾಯಗಳು ಸಮವಾಗಿವೆ. ಆದ್ದರಿಂದ ಎಲ್ಲರೂ ಸೇರಿ ಧರ್ಮ ಪಾಲನೆ ಮಾಡಬೇಕು ಎಂದು ಜಗದ್ಗುರು ನಾಡೋಜ ಡಾ. ಅನ್ನದಾನೇಶ್ವರ ಮಹಾಶಿವಯೋಗಿಗಳು ಹೇಳಿದರು.
ತಾಲೂಕಿನ ಹೆಡಗಾಪೂರ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಶಿವಾಚಾರ್ಯರಿಗೆ ಭಾನುವಾರ ಹಮ್ಮಿಕೊಂಡಿರುವ ಗುರುವಂದನಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಅವರು ವೀರಶೈವ – ಲಿಂಗಾಯತ ದೇಹ-ಪ್ರಾಣವಿದ್ದಂತೆ. ದೇಹದ ಹೊರತಾಗಿ ಪ್ರಾಣ ಹಾಗೂ ಪ್ರಾಣದ ಹೊರತಾಗಿ ದೇಹವಿರಲು ಸಾಧ್ಯವಿಲ್ಲ ಎಂಬುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ’ ಯಾರು ಲಿಂಗವನ್ನು ಕಟ್ಟುತ್ತಾರೋ ಅವರೆಲ್ಲರೂ ಲಿಂಗಾಯತರೇ. ಇದರಲ್ಲಿ ವೀರಶೈವ, ಲಿಂಗಾಯತ ಎಂಬ ಪ್ರತ್ಯೇಕತೆ ಇಲ್ಲ. ಇಷ್ಟೆಲ್ಲಾ ಸಮಾಜದಲ್ಲಿ ಬಲಿಷ್ಠರು ದುರ್ಬಲರನ್ನು ತಿಳಿಯುವುದಕ್ಕಾಗಿ ನಡೆಯುತ್ತಿರುವ ಹುನ್ನಾರಗಳು ಅಷ್ಟೇ. ಸಮಾಜದಲ್ಲಿ ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮವಿಲ್ಲ. ಎರಡೂ ಒಂದೆಯಾಗಿವೆ. ಎಲ್ಲರೂ ಸೇರುವ ಮೂಲಕ ಧರ್ಮದ ಅಭಿವೃದ್ಧಿಗಾಗಿ ಶ್ರಮಿಸಬೇಕು ಸಲಹೆ ನೀಡಿದರು. ಪ್ರತಿಯೊಬ್ಬರು ಇಷ್ಟಲಿಂಗ ಪೂಜೆ ಮಾಡುವ ಜತೆಗೆ ವಿಭೂತಿ ಹಚ್ಚಿಕೊಳ್ಳಬೇಕು. ರುದ್ರಾಕ್ಷಿ ಧಾರಣೆ ಮಾಡಬೇಕು ಇದರಿಂದ ನಮ್ಮ ಧರ್ಮದ ಸಂಸ್ಕøತಿ ಪಾಲನೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಭಾತಂಬ್ರಾ ನಿರಂಜನ ಸಂಸ್ಥಾನ ಮಠದ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ತನ್ನ ದೇಹದ ಬಗ್ಗೆ ಅರಿಯದಿದ್ದರೆ ಆತ ದೇವರ ಬಗ್ಗೆ ಎಂದಿಗೂ ಅರಿಯಲಾರನು. ನಿತ್ಯ ಧ್ಯಾನ, ಪೂಜೆ, ಇಷ್ಟಲಿಂಗ ಸಂಧಾನವನ್ನು ಮಾಡುವ ಮೂಲಕ ದೇಹವೇ ದೇವಾಲಯವನ್ನಾಗಿಸಿಕೊಳ್ಳಬೇಕು ಎಂದರು. ಧರ್ಮದ ಅಭಿಮಾನ ಹೊಂದುವ ಮೂಲಕ ಸಮಾಜ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಅಭಿಮಾನ ಇಲ್ಲದ ವ್ಯಕ್ತಿ ಇದ್ದು ಇಲ್ಲದಂತೆ ಎಂದರು.
ಹುಕ್ಕೇರಿ ಮಠ ಶ್ರೀಗಳಾದ ಸದಾಶಿವ ಮಹಾಸ್ವಾಮಿಜಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹುಲಸೂರ ಶ್ರೀಗಳಾದ ಡಾ. ಶಿವಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿದರು. ಚಿಟಗುಪ್ಪ ಶ್ರೀ ಗುರುಲಿಂಗ ಶಿವಾಚಾರ್ಯರು, ಹಲಬರ್ಗಾ ಶ್ರೀ ಹಾವಗಿಲಿಂಗ ಶಿವಾಚಾರ್ಯರು, ಹಣೇಗಾಂವ ಶ್ರೀ ಶಂಕರಲಿಂಗ ಶಿವಾಚಾರ್ಯರು, ಠಾಣಾಕುಶನೂರ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಗಳು, ಡಾಕುಳಗಿ ಶ್ರೀ ಚನ್ನಬಸವ ಸ್ವಾಮಿಜಿಗಳು, ಕೌಳಾಸ ಶ್ರೀ ಬಸವಲಿಂಗ ಶಿವಾಚಾರ್ಯರು, ರಟಕಲ್ ಶ್ರೀ ಸಿದ್ಧರಾಮ ಮಹಾಸ್ವಾಮಿಜಿಗಳು, ನಾಗೂರ ಶ್ರೀ ಅಲ್ಲಮಪ್ರಭುಲಿಂಗೇಶ್ವರ ಮಹಾಸ್ವಾಮಿಜಿಗಳು, ಹುಡಗಿ ಶ್ರೀ ಚೆನ್ನಮಲ್ಲ ಮಹಾಸ್ವಾಮಿಜಿಗಳು, ಸಾಯಗಾಂವ ಶ್ರೀ ಶಿವಾನಂದ ಮಹಾಸ್ವಾಮಿಜಿಗಳು, ಗಂಜಿಕಟ್ಟಿ ಶ್ರೀ ಶಿವಲಿಂಗ ಶಿವಾಚಾರ್ಯರು, ಮಂಟಾಳ ಶ್ರೀ ಅಭಿನವ ಚೆನ್ನಬಸವ ಮಹಾಸ್ವಾಮಿಗಳು, ಚಿಟಗುಪ್ಪ ಶ್ರೀ ಗುರುಲಿಂಗ ಶಿವಾಚಾರ್ಯರು ಮಾತನಾಡಿದರು. ಶಿವಕುಮಾರ ತರನಳ್ಳಿ ಉಪನ್ಯಾಸ ನೀಡಿದರು. ರಾಜಶ್ರೀ ಶ್ರೀಕಾಂತ ಸ್ವಾಮಿ ಪ್ರಾಸ್ತವಿಕ ಮಾತನಾಡಿದರು.
ಕೇದಾರಲಿಂಗ ದೇವರು, ಬೊಮ್ಮಲಿಂಗ ದೇವರು, ರವಿಕಿರಣ ದೇವರು, ಭೋಜಲಿಂಗ ದೇವರು, ಷಡಕ್ಷರಿ ದೇವರು, ಶಿವಬಸವ ದೇವರು, ರಾಚೋಟೇಶ್ವರ ದೇವರು, ಪ್ರಮುಖರಾದ ಶ್ರೀಮಂತ ಪಾಟೀಲ್, ರಾಜಶೇಖರ ಪಾಟೀಲ್, ಹಣಮಂತ ಪಾಟೀಲ್, ಸುರೇಶ ಶೆಟಕಾರ, ವಿಜಯಕುಮಾರ ಪಾಟೀಲ್, ಸೋಮಶೇಖರ ಪಾಟೀಲ್ ಗಾದಗಿ ಸೇರಿದಂತೆ ಅನೇಕರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಿಸಿದರು. ಶಿವಕಾಂತ ಸ್ವಾಮಿ ವಂದಿಸಿದರು.
ಗುರುಪಟ್ಟಾಧಿಕಾರ ಮಹೋತ್ಸವ
ಏ. 15ರಂದು ಸೋಮವಾರ ಬೆಳಗ್ಗೆ 6 ಗಂಟೆಗೆ ಉಜ್ಜಯಿನಿ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಕೇದಾರಲಿಂಗ ದೇವರು ಅವರಿಗೆ ಷ.ಬ್ರ 108 ದಾರುಕಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ನಾಮಾಂಕಿತವನ್ನು ನೀಡುವ ಮೂಲಕ ಗುರುಪಟ್ಟಾಧಿಕಾರ ಮಾಡಲಿದ್ದಾರೆ. ಈ ವೇಳೆ ರಾಜ್ಯ ಸೇರಿದಂತೆ ನೇರರಾಜ್ಯಗಳ ಸ್ವಾಮಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಧರ್ಮಸಭೆ ಮತ್ತು ಪೀಠಾರೋಹಣ ನಡೆಯಲಿದೆ. ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಲಡ್ಡು ಸವಿದ ಭಕ್ತರು
ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಭಕ್ತರಿಗಾಗಿ ಲಡ್ಡು, ರೊಟ್ಟಿ, ಅನ್ನ, ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಯಿತು. ಗ್ರಾಮದ ಯುವ ಪಡೆ ಸೇರಿದಂತೆ ಹಿರಿಯರು ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದರು. ಭಕ್ತರಿಗೆ ಸಮಸ್ಯೆ ಆಗದಂತೆ ಊಟದ ವ್ಯವಸ್ಥೆ ಮಾಡುವ ಮೂಲಕ ಗ್ರಾಮಸ್ಥರು ಮೆಚ್ಚುಗೆಗೆ ಪಾತ್ರವಾದರು.