ಶುಶ್ರೂಷಾ ಶಾಲೆ, ಕಾಲೇಜಿಗೆ ಸೌಕರ್ಯ: ಭರವಸೆ
ಬೀದರ್: ಏ.15:ರಾಜ್ಯದ ಸರ್ಕಾರಿ ನಸಿರ್ಂಗ್ ಶಾಲೆ ಹಾಗೂ ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಬಿ.ಎಸ್. ಸುಜಾತಾ ರಾಠೋಡ್ ಭರವಸೆ ನೀಡಿದರು.
ನಗರದ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಇರುವ ಸರ್ಕಾರಿ ನಸಿರ್ಂಗ್ ಶಾಲೆಯಲ್ಲಿ ಶನಿವಾರ ನಡೆದ ನಸಿರ್ಂಗ್ ಶಾಲೆಯ ಜಿ.ಎನ್.ಎಂ. 8ನೇ ತಂಡ ಹಾಗೂ ಬ್ರಿಮ್ಸ್ ನಸಿರ್ಂಗ್ ಕಾಲೇಜಿನ ಬಿ.ಎಸ್ಸಿ ನಸಿರ್ಂಗ್ ಎರಡನೇ ತಂಡದ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಹಾಗೂ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಸಿರ್ಂಗ್ ಶಾಲೆ ಹಾಗೂ ಕಾಲೇಜುಗಳ ಕುಂದು ಕೊರತೆಗಳನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.
ನಸಿರ್ಂಗ್ ಶಾಲೆ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಳ, ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾತಿ, ನಸಿರ್ಂಗ್ ಶಾಲೆ ಹಾಗೂ ಕಾಲೇಜಿಗೆ ಬಸ್ ಕಲ್ಪಿಸುವ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಶುಶ್ರೂಷಾ ವೃತ್ತಿ ವೈದ್ಯಕೀಯ ಕ್ಷೇತ್ರದಲ್ಲೇ ಶ್ರೇಷ್ಠವಾಗಿದೆ. ಶುಶ್ರೂಷಾ ಶಾಲೆ, ಕಾಲೇಜು ವಿದ್ಯಾರ್ಥಿಗಳು ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವೆಯನ್ನು ಅನುಕರಿಸಬೇಕು. ಮಾನವೀಯ ನೆಲೆಯಲ್ಲಿ ರೋಗಿಗಳ ಆರೈಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಸರ್ಕಾರಿ ನಸಿರ್ಂಗ್ ಶಾಲೆ ಹಾಗೂ ಕಾಲೇಜು ಪ್ರಾಚಾರ್ಯ ರಾಜಕುಮಾರ ಮಾಳಗೆ ಮಾತನಾಡಿ, ಸದ್ಯ ಸರ್ಕಾರಿ ನಸಿರ್ಂಗ್ ಶಾಲೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಕ್ರಮವಾಗಿ ಮಾಸಿಕ ತಲಾ ರೂ. 1,500, ರೂ. 1,700 ಹಾಗೂ ರೂ. 1,900 ಶಿಷ್ಯವೇತನ ಇದೆ. ಇಂದಿನ ಬೆಲೆ ಏರಿಕೆ ದಿನಮಾನಗಳಲ್ಲಿ ಇದು ವಿದ್ಯಾರ್ಥಿಗಳಿಗೆ ಊಟ ಸೇರಿ ಇತರ ಖರ್ಚಿಗೆ ಸಾಲದಾಗಿದೆ. ಶಿಷ್ಯವೇತನ ಮೊತ್ತ ರೂ. 5 ಸಾವಿರಕ್ಕೆ ಏರಿಸಬೇಕು ಎಂದು ಮನವಿ ಮಾಡಿದರು.
ನಸಿರ್ಂಗ್ ಕಾಲೇಜು ವಿದ್ಯಾರ್ಥಿಗಳಿಗೂ ಶೀಷ್ಯವೇತನ ಮಂಜೂರು ಮಾಡಬೇಕು. ನಸಿರ್ಂಗ್ ಶಾಲೆ ಹಾಗೂ ಕಾಲೇಜುಗಳಿಗೆ ಬಸ್ ಒದಗಿಸಬೇಕು ಎಂದು ಕೋರಿದರು.
ಕರ್ನಾಟಕ ನಸಿರ್ಂಗ್ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸ ಡಾ. ಮಹೇಶ ಬಿರಾದಾರ ಮಾತನಾಡಿದರು.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ವೈದ್ಯಕೀಯ ಅಧೀಕ್ಷಕ ಶಿವಯೋಗಿ ಬಾಳಿ, ಬ್ರಿಮ್ಸ್ ಪ್ರಾಚಾರ್ಯ ಡಾ. ರಾಜೇಶ ಪಾರಾ, ನಸಿರ್ಂಗ್ ಅಧೀಕ್ಷಕರಾದ ಸುಧಾ ಚಂದನ್, ಇಮಾನುವೆಲ್ ಕೊಡ್ಡಿಕರ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ. ಸಂಜುಕುಮಾರ ಪಾಟೀಲ, ಡಾ. ಉಮಾ ದೇಶಮುಖ, ಡಾ. ದೀಪಾ ಖಂಡ್ರೆ ಇದ್ದರು.
ಅನಿತಾ ದಂಡೆ ಸ್ವಾಗತಿಸಿದರು. ಪ್ರಕಾಶ ಮಹಿಮಾಕರ್ ನಿರೂಪಿಸಿದರು.