ಭುವನೇಶ್ವರರ ಕಥೆಗಳು ಜೀವನಾನುಭವಗಳ ಸಂಕಲನ:ಪೀರ್ ಬಾಷಾ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.15: ಕವಿ,ಸಾಹಿತಿ,ಕಥೆಗಾರರು ಕಂಡು  ಕೇಳಿದ ಸಂಗತಿಗಳಿಗೆ ತಮ್ಮ ಕಲ್ಪನೆಯ ಹಂದರವನ್ನು ಕಟ್ಟಿ ಸಾಹಿತ್ಯ ಸೃಷ್ಟಿಸುತ್ತಾರೆ.ಸಾಹಿತ್ಯದ ಭಾಷೆ ಮತ್ತು ಶೈಲಿಗಳು‌ ಬಹುಪಾಲು ಸಮಕಾಲೀನ ಕವಿ ಸಾಹಿತಿಗಳ ಅನುಕರಣೆಗಳೇ ಆಗಿರಲು ಸಾಧ್ಯ.
ಆದರೆ ಮೋಕ‌ ಗ್ರಾಮದ ಕುಂಬಾರ ಭುವನೇಶ್ವರರ ಕಥಾಸಂಕಲನ ವೆಂದು ಕರೆಯುವ ಧರೆಗೆ‌ದೂಡ್ಢವರು ಕೃತಿಯ ಎಲ್ಲ ಸಂಗತಿಗಳು,ಭುವನೇಶರು ತಮ್ಮ ಕಿರಾಣಿ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುವಾಗ ತಮ್ಮ ಪರಿಸರಕ್ಕೆ ಬಂದ ಜನ ( ಗಿರಾಕಿ‌ ) ಗಳ
ನಡೆ,ನುಡಿ,ವರ್ತನೆಗಳಲ್ಲಿ ಕಂಡುಕೊಂಡ ಜೀವನಾನುಭವ ಗಳ ಸಂಕಲನಗಳಾಗಿವೆ ಎಂದು ಸಾಹಿತಿ ಬಿ.ಪೀರ್ ಬಾಷಾ ನುಡಿದರು. ಅವರು ನಿನ್ನೆ  ನಗರದ ರಾಘವ ಕಲಾಮಂದಿರದಲ್ಲಿ‌ ಮೋಕಾದ‌ ಸರ್ವಜ್ಞ ಪ್ರಕಾಶನ, ಬಳ್ಳಾರಿ ಜಿಲ್ಲಾ ಕುಂಬಾರರ ಸಂಘ,ಆಲಾಪ್ ಸಂಗೀತ ಕಲಾ ಟ್ರಸ್ ಗಳ ಸಂಯೋಗದಲ್ಲಿ ಜರುಗಿದ 
ಮೋಕ ಕುಂಬಾರ ಭುವನೇಶ್ವರರ “ಧರೆಗೆ‌ದೊಡ್ಡವರು” ಕಥಾಸಂಕಲನ 
ಲೋಕಾರ್ಪಣಾ ಸಮಾರಂಭದಲ್ಲಿ ಕೃತಿ ಪರಿಚಯ ಮಾಡುತ್ತಾ ಭುವನೇಶ್ವರರ ಸರಳ ಸಜ್ಜನಿಕೆ,ಸ್ನೇಹ ಸೌಹಾರ್ಧ ಗುಣಗಳ ಕೈಗನ್ನಡಿ ಈ ಕೃತಿಯಾಗಿದೆ ಎಂದರು.
ಭುವನೇಶ್ವರರ ಎರಡನೇ ಕೃತಿಯಾದ ಧರೆಗೆ ದೊಡ್ಡವರು ಕಥಾ ಸಂಕಲನ ಲೋಕಾರ್ಪಣೆ ಮಾಡಿದ ಬುಡಕಟ್ಟು ಅಧ್ಯೇಯನ ವಿಭಾಗದ ಪ್ರಾಧ್ಯಾಪಕರ ಡಾ.ಕೆ.ಎಂ.ಮೇತ್ರಿಯವರು ಮಾತನಾಡುತ್ತಾ, ಕಿರಾಣಿ ಅಂಗಡಿಯ ವ್ಯಾಪಾರದ ನಡುವೆಯೂ ತಮ್ಮ ಗಮನವನ್ನು ಜನರ ವರ್ತನೆಯ ಕಡೆಗೆ ಸೂಕ್ಷ್ಮೀಕರಿರುವುದು ಮತ್ತು ಅವನ್ನು ಗ್ರಹಿಸಿ, ಬರವಣಿಗೆಯಲ್ಲಿ ಸಂಗ್ರಹಿಸಿರುವುದು ಭುವನೇಶ್ವರ ಬರವಣಿಗೆಯ ವಿಶೇಷವಾಗಿದೆ ಎಂದರು.
 ಅಧ್ಯಕ್ಷತೆ ವಹಿಸಿದ್ದ ಲೋಹಿಯಾ ಪ್ರಕಾಶನದ ಪ್ರಕಾಶಕ ಪಿ.ಚನ್ನಬಸವಣ್ಣ ಮಾತನಾಡಿ,
  ಕಪಟವರಿಯದ ಮುಗ್ದ ಮನಸ್ಸಿನ ಭುವನೇಶರು ವ್ಯಾಪಾರದಿಂದ ಹಣ ಗಳಿಸದೇ ಅಪಾರವಾದ ಗುಣಗ್ರಾಹಿ ಸಹೃದಹರನ್ನು ,ಸಾಹಿತಿ ಬಳಗವನ್ನು ಗಳಿಸಿದ್ದಾರೆ. ಮೊದಲ ಕೃತಿ ಅಂತರಾಳ, ಇಂದಿನ ಧರೆಗೆ ದೊಡ್ಡವರು‌ ಎರಡೂ ಕಥಾಸಂಕಲನ ಗಳಲ್ಲಿ ಇವರ ನಡೆ ನುಡಿಯೊಂದಾದ ಶರಣತ್ವ ಎದ್ದುಕಾಣುತ್ತದೆ ಎಂದರು.
ಅಪಾರ ಅಭಿಮಾನಿ ಬಳಗ ಸಾಹಿತಿ ಮಿತ್ರರು ಕಥೆಗಾರ ಮೋಕಾ ಕುಂಬಾರ ಭುವನೇಶ್ವರರನ್ನು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಭುವನೇಶ್ವರರು,”ನಾನು ಸಾಹಿತಿಯಾಗಬೇಕೆಂದು ಬರೆದ ವನಲ್ಲಾ, ನಾ ಕಂಡ ವೈರುದ್ಯ, ವಿಶೇಷತೆಗಳ ತಾಕಲಾಟಗಳನ್ನು ತಾಳಲಾರದೇ ಅನಿವಾರ್ಯ ವಾಗಿ ಇದ್ದಂತೆಯೇ ಬರಹದಲ್ಲಿ ಇಳಿಸುವ ಪ್ರಯತ್ನ ಮಾಡಿರುವೆ.ಇದಕ್ಕೆ ಈ ಮನ್ನಣೆ ಗೌರವ ದೊರೆಯುವುದೆಂದು‌ ನಾನು ಊಹಿಸಿರಲಿಲ್ಲ.ಇದು ತಮ್ಮೆಲ್ಲರ ನನ್ನ ಮೇಲಿನ ಅಭಿಮಾನ “ವೆಂದು ಸಭಿಕರಿಗೆ  ಕೃತಜ್ಞತೆ ಸಲ್ಲಿಸಿದರು.
 ಎಮ್ಮಿಗನೂರಿನ  ಜಡೆಪ್ಪ,ಸಂಗೀತ ಶಿಕ್ಷಕರಾದ ದೊಡ್ಡ ಬಸವ ಗವಾಯಿ ಹಾಗೂ ವಿಧ್ಯಾರ್ಥಿ ವೃಂದ ಸಂಗಿತ ಗಾಯನ ನಡೆಸಿಕೊಟ್ಟರು.ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್,ಮತ್ತು ತ್ರಿಪದಿ ಬ್ರಹ್ಮ ಸರ್ವಜ್ಞರ ಭಾವಚಿತ್ರಗಳಿಗೆ ಪುಷ್ಪಾರ್ಚನೆಮಾಡಿ ಜ್ಯೋತಿ ಬೆಳಗಿಸುವುದರ ಮೂಲಕ ವೇದಿಕೆಯ ಅತಿಥಿಗಳು ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿದರು.ವೇದಿಕೆಯಲ್ಲಿ ಸರ್ವಜ್ಞ ಪ್ರಕಾಶನದ  ಕೆ.ಜಯ ಲಕ್ಷ್ಮಿ, ಆಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ,ಬಳ್ಳಾರಿ ಜಿಲ್ಲಾ ಕುಂಬಾರರ ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
,ಕೆ.ಬಿ.ಸಿದ್ಧಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.
One attachment • Scanned by Gmail