ಅಂಬೇಡ್ಕರ್ ಆದರ್ಶ ಸಾರ್ವಕಾಲಿಕ ಶ್ರೇಷ್ಠ : ಗುರುನಾಥ ರಾಜಗೀರಾ
ಬೀದರ :ಏ.15: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಸಾರ್ವಕಾಲಿಕ ಶ್ರೆ?ಷ್ಠವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತರು ವಕೀಲರಾದ ಗುರುನಾಥ ರಾಜಗೀರಾ ಹೇಳಿದರು.
ನಗರದ ಸನ್ ಸಾಫ್ಟ್ ಪದವಿ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶಕ್ಕೆ ಮರೆಯಲಾಗದ ಕೊಡುಗೆ ಸಂವಿಧಾನ ನೀಡಿದ್ದು ಇದನ್ನು ಪ್ರತಿಯೊಬ್ಬರೂ ಕೂಡ ಅಧ್ಯಯನ ಮಾಡುವುದು ಅಗತ್ಯವಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನತೆ ಕಲ್ಪಿಸಿದ್ದಾರೆ ಹೀಗಾಗಿ ಅವರು ನೀಡಿರುವಂತಹ ಸಂವಿಧಾನವು ವಿಶ್ವಕ್ಕೆ ಮಾದರಿಯಾಗಿದೆ. ಇದು ನಿಜಕ್ಕೂ ಮೆಚ್ಚುವಂತಹ ಕೆಲಸವಾಗಿದೆ, ವಿಶೇಷವಾಗಿ ಯುವ ಜನತೆ ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು ಮತ್ತು ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗಬೇಕು, ಅಂದಾಗಲೇ ಬಲಿಷ್ಠವಾಗಿ ದೇಶ ಕಟ್ಟಲು ಅನುಕೂಲವಾಗುತ್ತದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನಾ ಕಾರ್ಯದರ್ಶಿ ಹೇಮಂತ ಅವರು ಮಾತನಾಡಿ ಶಿಕ್ಷಣ ಮನುಷ್ಯನನ್ನು ಸ್ವಾಭಿಮಾನಿಯನ್ನಾಗಿ ಮಾಡುತ್ತದೆ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯು ಸುಶಿಕ್ಷಿತನಾಗಬೇಕು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೊಸ್ಕರ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಕ್ರಿಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಆಶಾ, ಕಾಲೇಜು ಕಾರ್ಯದರ್ಶಿ ನಾಗರಾಜ, ಓಂಕಾರ, ಸಾಯಿಕಿರಣ, ಸುಶ್ಮಿತಾ, ಶ್ರುತಿ ಸೇರಿದಂತೆ ಇತರರಿದ್ದರು