ನಾಸಿರ್ ಸ್ವಾಗತಕ್ಕೆ ಪ್ರತಿಭಟಿಸಿದ ಬಿಜೆಪಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರ ನಿನ್ನೆಯ ಸಂಜೆಯ ಅವರ ಬೆಂಬಲಿಗರ ಸ್ವಾಗತಕ್ಕೆ ವಿರೋಧವಾಗಿ ನಗರದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆಗೆ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದರು.ಈ ವೇಳೆ ಪೊಲೀಸರು ಅವರನ್ನು ತಡೆದು ಬಂಧಿಸಿ ಡಿ.ಎ.ಆರ್ ಮೈದಾನದಲ್ಲಿ ಕೂಡಿಹಾಕಿ ನಾಸೀರ್ ಅವರ ಸ್ವಾಗತ ಮುಗಿದ ಮೇಲೆ ಬಿಡುಗಡೆ ಮಾಡಲಾಯಿತು.
ತಾವು ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದಾಗ ನಾಸೀರ್ ಹುಸೇನ್ ಅವರು ಪಾಕಿಸ್ತಾನ ಪರ ತನ್ಮ ಬೆಂಬಲಿಗರಿಂದ ಜೈಕಾರ ಹಾಕಿಸಿದ್ದರು. ಅಂತಹವರಿಗೆ ಸ್ವಾಗತವೇಕೆ ಎಂದು  ಪ್ರತಿಭಟನೆ ನಡೆಸಲಾಗಿತ್ತು.
ನಾಸಿರ್ ಹುಸೇನ್ ವಿರುದ್ಧ ಹೋರಾಟ ಮಾಡಲು ಹೋದರೆ  ಭ್ರಷ್ಟ ಕಾಂಗ್ರೆಸ್ ಸರ್ಕಾರ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ  ಕಾರ್ಯಕರ್ತರನ್ನು ಅನಧಿಕೃತವಾಗಿ ಬಂಧಿಸಲಾಗಿದೆಂದು ಬಿಜೆಪಿ ಆರೋಪಿಸಿತ್ತು.
ಬಿಡುಗಡೆ ಮಾಡಿದ ಮೇಲೂ ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಬಿಜೆಪಿಯವರು ಡಿಸಿ ಕಛೇರಿ ಮುಂದೆ ನಾಸೀರ್ ವಿರುದ್ದ ಪ್ರತಿಭಟನೆ ನಡೆಸಿದ್ದಲ್ಲದೇ ನಾಸೀರ್ ಅವರ ಸ್ವಾಗತಕ್ಕೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿತು. ಅಲ್ಲದೇ ವಿನಾಕಾರಣ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲು ಎಸ್.ಪಿ ರವಿಕುಮಾರ್ ಕಾರಣರಾಗಿದ್ದು ಅವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿತು. ಕೊನೆಗೆ ಜಿಲ್ಲಾಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಾಗ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸ್ಥಳಕ್ಕೆ ಆಗಮಿಸಿ ಬಿಜೆಪಿ ಅವರ ಅಹವಾಲನ್ನು ಆಲಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳಲಾಯಿತು.